ADVERTISEMENT

ಆರು ತಾಸು ಇ.ಡಿ. ವಿಚಾರಣೆ ಎದುರಿಸಿದ ಡಿ.ಕೆ.ಸುರೇಶ್‌

ಜುಲೈ 7ರಂದು ಮತ್ತೊಮ್ಮೆ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 16:11 IST
Last Updated 23 ಜೂನ್ 2025, 16:11 IST
ಡಿ.ಕೆ.ಸುರೇಶ್
ಡಿ.ಕೆ.ಸುರೇಶ್   

ಬೆಂಗಳೂರು: ಐಶ್ವರ್ಯಾ ಗೌಡ ವಿರುದ್ಧದ ವಂಚನೆ ಆರೋಪ ಸಂಬಂಧ ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್‌ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಸುಮಾರು ಆರು ತಾಸು ಸೋಮವಾರ ವಿಚಾರಣೆಗೆ ಒಳಪಡಿಸಿದರು. 

ಶಾಂತಿನಗರ ಕಚೇರಿಯಲ್ಲಿ ಬೆಳಿಗ್ಗೆ 11.45 ರಿಂದ ಸಂಜೆ 5.45 ರವರೆಗೆ ವಿಚಾರಣೆಗೆ ನಡೆಸಿದ ಅಧಿಕಾರಿಗಳು,‘ಐಶ್ವರ್ಯಗೌಡ ಅವರು ನಿಮಗೆ ಹೇಗೆ ಪರಿಚಯ? ಅವರ ಜತೆ ನಿಮಗೆ ಹಣಕಾಸಿನ ವ್ಯವಹಾರವಿತ್ತಾ? ಎಷ್ಟು ದಿನಗಳಿಂದ ಪರಿಚಯ? ಆಕೆ ಈ ಪ್ರಕರಣದಲ್ಲಿ ನಿಮ್ಮ ಹೆಸರನ್ನು ಹೇಳಲು ಕಾರಣವೇನು’ ಎಂಬ ಪ್ರಶ್ನೆಗಳನ್ನು ಕೇಳಿ ಸುರೇಶ್ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಚಾರಣೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ.ಸುರೇಶ್, ‘ತನಿಖಾಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ತನಿಖೆಗೆ ಸಂಪೂರ್ಣ ಸಹಕರಿಸಿದ್ದೇನೆ. ಐಶ್ವರ್ಯಾ ಗೌಡ ಅವರು ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ನನ್ನ ಜೊತೆ ಪರಿಚಯವಿದೆ ಎಂದು ನಂಬಿ ಕೆಲವರು ಹಣ ನೀಡಿ ವಂಚನೆಗೊಳಗಾಗಿದ್ದಾರೆ’ ಎಂದು ಹೇಳಿದರು.

ADVERTISEMENT

‘ಒಮ್ಮೆ ಕನ್ನಡ ರಾಜೋತ್ಸವಕ್ಕೆ ಮಾತ್ರ ಕರೆದಿದ್ದು, ನಾನು ಹೋಗಿದ್ದೆ. ಆದರೆ ಆಕೆಯೊಂದಿಗೆ ನೇರ ಮಾತಿನ ವ್ಯವಹಾರ ಆಗಿರಲಿಲ್ಲ. ಪ್ರಕರಣ ಸಂಬಂಧ ಜುಲೈ 7ರಂದು ಮತ್ತೆ ಕರೆದಿದ್ದು, ವಿಚಾರಣೆಗೆ ಹಾಜರಾಗುತ್ತೇನೆ’ ಎಂದು ತಿಳಿಸಿದರು. 

ಇದಕ್ಕೂ ಮುನ್ನ ಮಾಧ್ಯಮದವರ ಜತೆ ಮಾತನಾಡಿದ ಸುರೇಶ್, ‘ಐಶ್ವರ್ಯಾ ಗೌಡ ಹಾಗೂ ನಮ್ಮ ನಡುವೆ ಯಾವುದೇ ಹಣಕಾಸು ಹಾಗೂ ಇತರೇ ವಹಿವಾಟು ನಡೆದಿಲ್ಲ. ಅವರು 3–4 ಬಾರಿ ಗೃಹ ಕಚೇರಿಯಲ್ಲಿ ಭೇಟಿ ಮಾಡಿ, ಕೆಲವೊಂದು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ವಾಸ ಮಾಡುತ್ತಿದ್ದರು ಎನ್ನುವ ಕಾರಣಕ್ಕೆ ಅವರು ಆಯೋಜನೆ ಮಾಡಿದ್ದ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಇದರ ಹೊರತಾಗಿ ಬೇರೇನೂ ಇಲ್ಲ' ಎಂದು ಹೇಳಿದರು.

ಅಸಮಾಧಾನ: ಸೋಮವಾರ ಬೆಳಿಗ್ಗೆ 11 ಗಂಟೆಗೆ  ಇ.ಡಿ. ಕಚೇರಿಗೆ ವಿಚಾರಣೆಗೆ ಬರುವಂತೆ ಸೂಚಿಸಿತ್ತು. ಆದರೆ, 11.15ಕ್ಕೆ ವಿಚಾರಣೆಗೆ ಹಾಜರಾದರು. ತಡವಾಗಿ ಬಂದ ಕಾರಣ ಕಚೇರಿ ಹೊರಗಡೆಯೇ ಅವರನ್ನು ಕೂರಿಸಲಾಗಿತ್ತು. ನೋಂದಣಿ ಪುಸ್ತಕದಲ್ಲಿ ಸಹಿ ಮಾಡಿದ ಬಳಿಕವೂ ಸುರೇಶ್‌ ಅವರನ್ನು ಕಚೇರಿ ಒಳಗೆ ಬಿಡಲು ಇ.ಡಿ ಅಧಿಕಾರಿಗಳು ವಿಳಂಬ ಮಾಡಿದರು. ಆಗ ಸುರೇಶ್ ಅವರು, ಏರು ಧ್ವನಿಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರು. 

ಮುನ್ನೆಚ್ಚರಿಕೆ ಕ್ರಮವಾಗಿ ಶಾಂತಿನಗರದ ಇ.ಡಿ ಕಚೇರಿ ಬಳಿ 50 ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಇ.ಡಿ ವಿಚಾರಣೆ ಎದುರಿಸಲು ನಮ್ಮ ಕುಟುಂಬ ಸದಾ ಸಿದ್ಧ. ಯಾರದ್ದೋ ಹೇಳಿಕೆ ಮೇಲೆ ಡಿ.ಕೆ. ಸುರೇಶ್ ಅವರನ್ನು ವಿಚಾರಣೆಗೆ ಕರೆದಿದ್ದಾರೆ. ಇದನ್ನು ಮಾಧ್ಯಮಗಳು ವೈಭವೀಕರಿಸುವ ಅಗತ್ಯವಿಲ್ಲ ಡಿ.ಕೆ.
ಶಿವಕುಮಾರ್ ಉಪ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.