ADVERTISEMENT

ವೈದ್ಯೆಗೆ ₹ 1.77 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 3:41 IST
Last Updated 16 ಜನವರಿ 2020, 3:41 IST

ಬೆಂಗಳೂರು:ವೈವಾಹಿಕ ಜಾಲತಾಣದಲ್ಲಿ ಪರಿಚಿತನಾದ ವ್ಯಕ್ತಿಯೊಬ್ಬ ನಗರದ ವೈದ್ಯೆಗೆ ₹ 1.77 ಲಕ್ಷ ವಂಚಿಸಿದ ಪ್ರಕರಣ ಬಯಲಿಗೆ ಬಂದಿದೆ. ಈ ಕುರಿತು ತಿಲಕನಗರ ಠಾಣೆಯಲ್ಲಿ ವೈದ್ಯೆ ದೂರು ನೀಡಿದ್ದಾರೆ.

‘ಮಾಸ್ಕೊದಲ್ಲಿರುವುದಾಗಿ ಹೇಳಿಕೊಂಡ ಸಿದ್ಧಾರ್ಥ ರೋಹನ್‌ ಎಂಬಾತ ವೈವಾಹಿಕ ಜಾಲತಾಣ ಮೂಲಕ ನನಗೆ ಪರಿಚಯವಾಗಿದ್ದ. ನಂತರ, ಕಂಪನಿ ಕೆಲಸಕ್ಕೆ ಸಂಬಂಧಿಸಿದಂತೆ ವೆನಿಜುವೆಲಾಕ್ಕೆ ಬಂದಿದ್ದು, ಪ್ರಾಜೆಕ್ಟ್‌ಗೆ ಹಣದ ಸಮಸ್ಯೆ ಉಂಟಾಗಿದೆ. ಸಹಾಯ ಮಾಡುವಂತೆ ವಿನಂತಿಸಿದ್ದ. ಹಾಗಾಗಿ ಗುರುಗ್ರಾಮದಿಂದ ವಸ್ತುಗಳನ್ನು ಪೂರೈಸುವ ‘ಹಾಯ್‌ವಾಚು ಕಾತ್‌’ ಹೆಸರಿನ ಖಾತೆಗೆ ಡಿ.23ರಂದು ₹1,77,500 ಕಳುಹಿಸಿದ್ದೆ’ ಎಂದು ದೂರಿನಲ್ಲಿ ವೈದ್ಯೆ ತಿಳಿಸಿದ್ದಾರೆ.

‘ಬಳಿಕ, ಸಿದ್ಧಾರ್ಥ ರೋಹನ್‌ ತನಗೆ 850 ಡಾಲರ್‌ ಬಂದಿದೆ. ಆ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡುತ್ತೇನೆ ಎಂದಿದ್ದ. ಈ ಮಧ್ಯೆ, ಪಿ ಸಾಂಗ್‌ ಲಾಲ್‌ ಖಾನ್‌ ಕೌಲ್‌ ಎಂಬಾತ ಕರೆ ಮಾಡಿ, ನನ್ನ ಖಾತೆಗೆ ₹3.78 ಲಕ್ಷ ಜಮೆ ಮಾಡುವಂತೆ ಹೇಳಿದ್ದಾನೆ. ಅದಕ್ಕೆ ನಾನು ನಿರಾಕರಿಸಿದಾಗ, ಇಂಗ್ಲೆಂಡ್‌ನಿಂದ ಕರೆ ಮಾಡಿದ ಮತ್ತೊಬ್ಬ ವ್ಯಕ್ತಿ ಹಣ ಜಮೆ ಮಾಡುವಂತೆ ಮನವಿ ಮಾಡಿದ್ದ. ಈ ಬಗ್ಗೆ ಪರಿಶೀಲಿಸಿದಾಗ, ಇವರೆಲ್ಲರ ಕರೆ ಮಾಡಿದ ಮೊಬೈಲ್‌ ಸಂಖ್ಯೆಗಳು ನಕಲಿ ಎಂದು ಗೊತ್ತಾಗಿದೆ ಎಂದು ದೂರಿನಲ್ಲಿ ವೈದ್ಯೆ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.