ADVERTISEMENT

ಶಸ್ತ್ರಚಿಕಿತ್ಸೆಗೆ ಅವಕಾಶ: ಇದೇ 11ಕ್ಕೆ ಒಪಿಡಿ ಬಂದ್

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 13:44 IST
Last Updated 4 ಡಿಸೆಂಬರ್ 2020, 13:44 IST
ಡಾ.ಎಸ್.ಎಂ. ಪ್ರಸಾದ್
ಡಾ.ಎಸ್.ಎಂ. ಪ್ರಸಾದ್   

ಬೆಂಗಳೂರು: ಕೆಲವು ಶಸ್ತ್ರ ಚಿಕಿತ್ಸೆ ನಡೆಸಲು ಕೇಂದ್ರ ಸರ್ಕಾರವು ಆಯುರ್ವೇದ ವೈದ್ಯರಿಗೆ ಅವಕಾಶ ನೀಡಿರುವುದನ್ನು ವಿರೋಧಿಸಿರುವ ಆಲೋಪಥಿ ವೈದ್ಯರು, ಇದೇ 11ರಂದು ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರಗೆ ಹೊರರೋಗಿ ವಿಭಾಗದ (ಒಪಿಡಿ) ಸೇವೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಭಾರತೀಯ ವೈದ್ಯಕೀಯ ಸಂಘದ (ಐಎಂಎ) ನೇತೃತ್ವದಲ್ಲಿ ಈ ಮುಷ್ಕರ ನಡೆಯಲಿದೆ. ಅಪೆಂಡಿಕ್ಸ್‌, ಪಿತ್ತಕೋಶ, ಹಾನಿಕಾರಕವಲ್ಲದ ಗೆಡ್ಡೆ ತೆಗೆಯುವುದು, ಗ್ಯಾಂಗ್ರಿನ್‌, ಹಲ್ಲಿನ ರೂಟ್‌ಕ್ಯಾನಲ್‌ ಮುಂತಾದ ಸಾಮಾನ್ಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಆಯುರ್ವೇದ ವೈದ್ಯರಿಗೆ ಕೇಂದ್ರ ಸರ್ಕಾರ ಕಳೆದ ತಿಂಗಳು ಅನುಮತಿ ನೀಡಿತ್ತು. ಈ ಸಂಬಂಧ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಪ್ರಾಯೋಗಿಕವಾಗಿ ತರಬೇತಿ ಪಡೆದ ಸ್ನಾತಕೋತ್ತರ ಪದವೀಧರ ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದು.

ಕೇಂದ್ರದ ಈ ನಿರ್ಧಾರವನ್ನು ಖಂಡಿಸಿರುವ ಐಎಂಎ, ಸರ್ಕಾರವು ತನ್ನ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಒತ್ತಾಯಿಸಿದೆ. ಇದೇ 8 ರಂದು ವೈದ್ಯರು ಕಪ್ಪು ಪಟ್ಟಿ ಧರಿಸಿ ಸೇವೆ ಸಲ್ಲಿಸುವ ಮೂಲಕ ಪ್ರತಿಭಟಿಸಲಿದ್ದಾರೆ. 11ರಂದು ತುರ್ತು ಚಿಕಿತ್ಸೆಗಳು ಹಾಗೂ ಕೋವಿಡ್ ಸೇವೆಯಲ್ಲಿನ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸಲಿದ್ದಾರೆ.

ADVERTISEMENT

‘ನುರಿತ, ಅನುಭವಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವಾಗಲೇ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಇಷ್ಟಾಗಿಯೂ ಕೆಲವು ವೇಳೆ ಎಡವಟ್ಟು ಆಗುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ಆಯುರ್ವೇದದ ಶಲ್ಯ ಮತ್ತು ಶಾಲಕ್ಯ ಪದವೀಧರರಿಗೆ ಶಸ್ತ್ರಚಿಕಿತ್ಸೆಗೆ ಅವಕಾಶ ನೀಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಜನಸಾಮಾನ್ಯರಿಗೂ ಅರಿವು ಮೂಡಿಸಬೇಕಿದೆ. ಹೀಗಾಗಿ ಮುಷ್ಕರ ನಡೆಸಲು ತೀರ್ಮಾನಿಸಿದ್ದೇವೆ. ಅವರು ಆಯುರ್ವೇದ ಚಿಕಿತ್ಸಾ ವಿಧಾನವನ್ನು ಮುಂದುವರಿಸುವ ಬಗ್ಗೆ ನಮ್ಮ ವಿರೋಧವಿಲ್ಲ’ ಎಂದು ಐಎಂಎ ಕರ್ನಾಟಕ ಶಾಖೆಯ ಕಾರ್ಯದರ್ಶಿ ಡಾ.ಎಸ್.ಎಂ. ಪ್ರಸಾದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.