ADVERTISEMENT

ಪುರುಷರ ಕರಿನೆರಳಿನಿಂದ ಮಹಿಳೆಗೆ ವಿಮೋಚನೆ ಸಿಕ್ಕಿಲ್ಲ: ಪ್ರೊ. ದೊಡ್ಡರಂಗೇಗೌಡ ಬೇಸರ

ವಸುಮತಿ ಉಡುಪ ಅವರಿಗೆ ‘ವರ್ಷದ ಲೇಖಕಿ ಅಂಕಿತ ಪುಸ್ತಕ ಪುರಸ್ಕಾರ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 20:03 IST
Last Updated 8 ಸೆಪ್ಟೆಂಬರ್ 2019, 20:03 IST
ವಸುಮತಿ ಉಡುಪ ಅವರಿಗೆ ಪ್ರೊ. ದೊಡ್ಡರಂಗೇಗೌಡ ಅವರು‘ವರ್ಷದ ಲೇಖಕಿ - ಅಂಕಿತ ಪುಸ್ತಕ ಪುರಸ್ಕಾರ’ ನೀಡಿ ಗೌರವಿಸಿದರು. ಕರ್ನಾಟಕ ಲೇಖಕಿಯರ ಸಂಘದ ಕೋಶಾಧಿಕಾರಿ ಶಶಿರೇಖಾ, ಲೇಖಕಿ ಎಚ್.ಎಲ್. ಪುಷ್ಪಾ, ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ , ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಇದ್ದರು
ವಸುಮತಿ ಉಡುಪ ಅವರಿಗೆ ಪ್ರೊ. ದೊಡ್ಡರಂಗೇಗೌಡ ಅವರು‘ವರ್ಷದ ಲೇಖಕಿ - ಅಂಕಿತ ಪುಸ್ತಕ ಪುರಸ್ಕಾರ’ ನೀಡಿ ಗೌರವಿಸಿದರು. ಕರ್ನಾಟಕ ಲೇಖಕಿಯರ ಸಂಘದ ಕೋಶಾಧಿಕಾರಿ ಶಶಿರೇಖಾ, ಲೇಖಕಿ ಎಚ್.ಎಲ್. ಪುಷ್ಪಾ, ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ , ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಇದ್ದರು   

ಬೆಂಗಳೂರು: ‘ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರನ್ನು ದೇವತೆಗಳಿಗಿಂತ ಮಿಗಿಲು ಎಂದು ಬಿಂಬಿಸಲಾಗುತ್ತಿದೆ. ಆದರೆ, ಪುರುಷರ ಕರಿನೆರಳಿನಿಂದ ಈವರೆಗೂಮಹಿಳೆಯರಿಗೆ ವಿಮೋಚನೆ ಗೊಳ್ಳಲು ಸಾಧ್ಯವಾಗಿಲ್ಲ. ಸಿಗರೇಟಿನ ಬೆಂಕಿಯ ಕಿಡಿ ಹೆಣ್ಣಿನ ದೇಹವನ್ನು ಜರ್ಜರಿತಗೊಳಿಸುತ್ತಿದೆ’ ಎಂದು ಕವಿ ಪ್ರೊ. ದೊಡ್ಡರಂಗೇಗೌಡ ಭಾನುವಾರ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಲೇಖಕಿಯರ ಸಂಘ ನಗರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಲೇಖಕಿ ‘ವಸುಮತಿ ಉಡುಪ’ ಅವರಿಗೆ ‘ವರ್ಷದ ಲೇಖಕಿ ಅಂಕಿತ ಪುಸ್ತಕ ಪುರಸ್ಕಾರ’ ಪ್ರಶಸ್ತಿ ಪ್ರದಾನ ಮಾಡಿದರು.ಈ ಪ್ರಶಸ್ತಿ ₹ 35 ಸಾವಿರ ಹಾಗೂ ಫಲಕ ಹೊಂದಿದೆ.

ಹೆಣ್ಣು ಮಕ್ಕಳು ಕೇವಲ ಪುರುಷರನ್ನು ನಿಂದಿಸಿದರೆ ಪ್ರಯೋಜನ ವಿಲ್ಲ. ತಮ್ಮ ಸೃಜನಶೀಲ ಚಿಂತನೆಗಳಿಗೆ ಕ್ರಿಯಾತ್ಮಕ ರೂಪವನ್ನು ನೀಡಬೇಕು. ಹೆಣ್ಣು ಮನಸು ಮಾಡಿದರೆ ಸಂಕಷ್ಟದಲ್ಲಿರುವ ಕುಟುಂಬಗಳು ಸಹ ಏಳ್ಗೆ ಕಾಣಲಿವೆ’ ಎಂದು ಹೇಳಿದರು.

ADVERTISEMENT

‘ಹೆಣ್ಣು ಸಮಾಜದಲ್ಲಿ ಮುನ್ನೆಲೆಗೆ ಬರುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ಇದೇ ವೇಳೆ ನಮ್ಮ ಸಂಸ್ಕೃತಿಯನ್ನು ಮೂಲೆಗುಂಪು ಮಾಡಿ, ಪಾಶ್ಚಾತ್ಯ ಸಂಸ್ಕೃತಿಯೆಡೆಗೆ ವಾಲುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಎಂ.ಜಿ.ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಮಹಿಳೆಯರ ಕೈಯಲ್ಲಿ ಸಿಗರೇಟು ಕಂಡಾಗ ಒಂದು ಕ್ಷಣ ಕಸಿವಿಸಿಯಾಗುತ್ತದೆ. ಅದೇ ರೀತಿ, ಫ್ಯಾಷನ್ ಹೆಸರಿನಲ್ಲಿ ನಗ್ನತೆ ಪ್ರದರ್ಶಿಸು ವುದು ನಮ್ಮ ಸಂಸ್ಕೃತಿಗೆ ಒಗ್ಗುವುದಿಲ್ಲ. ಇದಕ್ಕೆಲ್ಲ ಒಂದು ಗಡಿ ಹಾಕಬೇಕು’ ಎಂದರು.

ಕವಯತ್ರಿ ಎಚ್‌.ಎಲ್ ಪುಷ್ಪಾ, ‘ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳನ್ನು ಮಹಿಳಾ ಸಾಹಿತಿಗಳು ಲೇಖನಿ ಮೂಲಕ ಖಂಡಿಸುತ್ತಾ ಬಂದಿದ್ದಾರೆ. ಬಾಲ್ಯ ವಿವಾಹ ಸೇರಿದಂತೆ ವಿವಿಧ ಸಾಮಾಜಿಕ ಪಿಡುಗುಗಳನ್ನು ದೂರ ಮಾಡುವಲ್ಲಿ ಸಹ ಮಹಿಳಾ ಸಾಹಿತಿಗಳು ಶ್ರಮಿಸಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.