ADVERTISEMENT

ಮಾಜಿ ಸೈನಿಕನ ಹತ್ಯೆ: ಶುಶ್ರೂಷಕ ಬಂಧನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 19:25 IST
Last Updated 15 ಏಪ್ರಿಲ್ 2022, 19:25 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಬೆಂಗಳೂರು: ದೊಮ್ಮಲೂರು ಬಳಿಯ ಗೌತಮ್‌ನಗರದಲ್ಲಿ ಮಾಜಿ ಸೈನಿಕ ಸುರೇಶ್ ಉರ್ಪ್ ಜ್ಯೂಡ್ ತೆಡ್ಡಾಸ್ (60) ಅವರನ್ನುಹತ್ಯೆ ಮಾಡಿದ್ದ ಆರೋಪದಡಿ ಶುಶ್ರೂಷಕ ಬಾಬು (24) ಸೇರಿ ಐವರನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶದ ಕುಪ್ಪಂನ ಬಾಬು, ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಶುಶ್ರೂಷಕ (ನರ್ಸ್) ಆಗಿ ಕೆಲಸ ಮಾಡುತ್ತಿದ್ದ. ಹಣ ಹಾಗೂ ಚಿನ್ನಾಭರಣ ದೋಚುವ ಉದ್ದೇಶದಿಂದ ಸುರೇಶ್ ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ. ಆಂಧ್ರಪ್ರದೇಶದಲ್ಲಿದ್ದ ಆತನನ್ನು ಬಂಧಿಸಿ ನಗರಕ್ಕೆ ಕರೆತರಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೃತ್ಯದಲ್ಲಿ ಭಾಗಿಯಾಗಿದ್ದ ಬಾಬುನ ಸಹೋದರ ಮುರುಳಿ (26), ಸ್ನೇಹಿತರಾದ ಗಜೇಂದ್ರ (26), ರಾಜೇಂದ್ರ (26), ದೇವೇಂದ್ರ (24) ಎಂಬುವರನ್ನೂ ಬಂಧಿಸಲಾಗಿದೆ. ಇವರಿಂದ ಎರಡು ಕಾರು ಹಾಗೂ ಐ–ಫೋನ್ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

ADVERTISEMENT

ತಾಯಿ ಆರೈಕೆಗೆ ಬಂದಿದ್ದ:‘ಸೇನೆಯಿಂದ ನಿವೃತ್ತರಾದ ನಂತರ ಸುರೇಶ್ ಅವರು ಗೌತಮ್‌ ನಗರದಲ್ಲಿ ವಾಸವಿದ್ದರು. ಪತ್ನಿಗೆ ವಿಚ್ಛೇದನ ನೀಡಿದ್ದರು. ನಂತರ ತಾಯಿ ಜೊತೆ ವಾಸವಿದ್ದರು. ತಾಯಿಗೆ ಹುಷಾರಿಲ್ಲದಿದ್ದರಿಂದ ಚಿಕಿತ್ಸೆ ಕೊಡಿಸಲು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಗಲೇ ಬಾಬು ಪರಿಚಯವಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಚಿಕಿತ್ಸೆ ನಂತರ ತಾಯಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ ಸುರೇಶ್, ಅವರ ಆರೈಕೆ ಮಾಡಲೆಂದು ಬಾಬುನನ್ನು ನೇಮಿಸಿಕೊಂಡಿದ್ದರು. ಇದರ ನಡುವೆಯೇ ತಾಯಿ ತೀರಿಕೊಂಡಿದ್ದರು. ಅದಾದ ನಂತರವೂ ಸುರೇಶ್ ಜೊತೆ ಬಾಬು ಒಡನಾಟ ಇಟ್ಟುಕೊಂಡಿದ್ದ’ ಎಂದು ವಿವರಿಸಿದರು.

‘ಸುರೇಶ್ ಬಳಿ ಹಣ ಹಾಗೂ ಚಿನ್ನಾಭರಣ ಇರುವುದು ಬಾಬುಗೆ ತಿಳಿದಿತ್ತು. ಅದನ್ನು ಲಪಟಾಯಿಸಲು ನಿರ್ಧರಿಸಿದ್ದ ಆತ ಸಹೋದರ ಹಾಗೂ ಸ್ನೇಹಿತರ ಜೊತೆ ಸೇರಿ ಸುರೇಶ್‌ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ’ ಎಂದೂ ತಿಳಿಸಿದರು.

‘ಏ. 13ರಂದು ರಾತ್ರಿ ಸುರೇಶ್ ಮನೆಗೆ ಬಾಬು ಬಂದಿದ್ದ. ನಂತರ, ಇತರೆ ಆರೋಪಿಗಳನ್ನೂ ಮನೆಗೆ ಕರೆಸಿಕೊಂಡಿದ್ದ. ಬಳಿಕ, ಎಲ್ಲರೂ ಕೈಗವಸು ಧರಿಸಿಕೊಂಡು ಸುರೇಶ್ ಅವರನ್ನು ಹತ್ಯೆ ಮಾಡಿದ್ದರು. ಸಾಕ್ಷ್ಯನಾಶ ಮಾಡುವ ಉದ್ದೇಶದಿಂದ ಮನೆಯಲ್ಲೆಲ್ಲ ಖಾರದ ಪುಡಿ ಎರಚಿ ಪರಾರಿಯಾಗಿದ್ದರು’ ಎಂದೂ ಹೇಳಿದರು.

ಸುಳಿವು ನೀಡಿದ್ದ ಸ್ಥಳೀಯರು: ‘ಆರೋಪಿ ಬಾಬು ಮನೆಗೆ ಬಂದು ಹೋಗಿದ್ದ ಸ್ಥಳೀಯರು, ಠಾಣೆಗೆ ಮಾಹಿತಿ ನೀಡಿದ್ದರು. ಅದೇ ಸುಳಿವು ಬೆನ್ನತ್ತಿ ಹೋದಾಗ ಆರೋಪಿ ಸಿಕ್ಕಿಬಿದ್ದ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.