ಬೆಂಗಳೂರು: ದೊಡ್ಡಕಲ್ಲಸಂದ್ರ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ. ಈ ಕೆರೆಗೆ ನೀರನ್ನು ತರುವ ರಾಜಕಾಲುವೆಗಳಿಗೆ ಎಲ್ಲೂ ಕೊಳಚೆ ನೀರು ಸೇರದಂತೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (ಆರ್‌ಡಬ್ಲ್ಯುಎ) ಜಲಮಂಡಳಿಯನ್ನು ಒತ್ತಾಯಿಸಿವೆ.
1974ರ ಜಲ (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆಯ ಸೆಕ್ಷನ್ 24ರ ಪ್ರಕಾರ ಯಾವುದೇ ಮಾಲಿನ್ಯಕಾರಕಗಳನ್ನು ಕಾಲುವೆಗಳಿಗೆ ಹರಿಯಬಿಡುವುದು ಅಪರಾಧ. 1964ರ ಜಲಮಂಡಳಿ ಕಾಯ್ದೆಯ ಸೆಕ್ಷನ್ 74ರ ಅನ್ವಯ ಯಾವುದೇ ಒಳಚರಂಡಿಯ ಕೊಳಚೆ ನೀರನ್ನು ಕಾಲುವೆಗೆ ಹರಿಯ ಬಿಡುವ ಮುನ್ನ ಶುದ್ಧೀಕರಿಸಬೇಕು. ದೊಡ್ಡಕಲ್ಲಸಂದ್ರ ಕೆರೆಯನ್ನು ಸಂಪರ್ಕಿಸುವ ಎರಡೂ ರಾಜಕಾಲುವೆಗಳಿಗೆ ತ್ಯಾಜ್ಯ ನೀರನ್ನು ಹರಿಯಬಿಡುವ ಮೂಲಕ ಈ ಕಾಯ್ದೆಗಳನ್ನು ಉಲ್ಲಂಘಿಸಲಾಗುತ್ತಿದೆ. ಇದರಿಂದಾಗಿಯೇ ಕೆರೆ ಕಲುಷಿತಗೊಳ್ಳುತ್ತಿದೆ ಎಂದು ಆರ್‌ಡಬ್ಲ್ಯುಎಗಳು ದೂರಿವೆ.
‘ಜಲಮಂಡಳಿಯು ಕೆರೆಯಿಂದ ಸುಮಾರು 1 ಕಿ.ಮೀ ದೂರದವರೆಗಾದರೂ ರಾಜಕಾಲುವೆಗೆ ಕೊಳಚೆ ನೀರು ಸೇರದಂತೆ ತಡೆದರೆ ಈ ಕೆರೆ ಮತ್ತೆ ಕಲುಷಿತಗೊಳ್ಳದಂತೆ ತಡೆಯಬಹುದು’ ಎಂದು ನಾರಾಯಣಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಎನ್.ಆರ್.ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಕೆರೆಯು ಸಮೃದ್ಧ ಜೀವವೈವಿಧ್ಯವನ್ನು ಹೊಂದಿದೆ. ಇಲ್ಲಿ ಸರ್ಕಾರೇತರ ಸಂಘಟನೆಯೊಂದು ನಡೆಸಿದ ಅಧ್ಯಯನ ಪ್ರಕಾರ 42 ಪ್ರಭೇದಗಳ 354 ಮರಗಳು, 4 ಪ್ರಭೇದಗಳ ಗಿಡಮೂಲಿಕೆ ಮತ್ತು ಪೊದೆ ಜಾತಿಯ ಸಸ್ಯಗಳಿವೆ. 71 ಪ್ರಭೇದಗಳ ಹಕ್ಕಿಗಳು, 43 ಪ್ರಬೇಧಗಳ ಚಿಟ್ಟೆಗಳು ಇಲ್ಲಿವೆ. ಅಲ್ಲದೇ ಸ್ಥಳೀಯರೇ ಸೇರಿ ಇಲ್ಲಿ 250ಕ್ಕೂ ಅಧಿಕ ಸಸಿಗಳನ್ನು ಬೆಳೆಸಿದ್ದೇವೆ. ಇವುಗಳನ್ನೆಲ್ಲ ರಕ್ಷಿಸಬೇಕಿದೆ’ ಎಂದು ಅವರು ತಿಳಿಸಿದರು.
‘ಸ್ಥಳೀಯರ ಸತತ ಪ್ರಯತ್ನದ ಫಲವಾಗಿ ಬಿಬಿಎಂಪಿ ಈ ಕೆರೆಯ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಕೆರೆ ನೀರನ್ನು ಬರಿದು ಮಾಡಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಡೆಸುವಾಗ ಜೀವವೈವಿಧ್ಯ ರಕ್ಷಣೆಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಬಿಬಿಎಂಪಿ ಅಧಿಕಾರಿಗಳು ನೀಡಿದ್ದರು. ಆದರೆ ಅದನ್ನು ಪಾಲಿಸುತ್ತಿಲ್ಲ. ಇಲ್ಲಿನ ಪರಿಸರವನ್ನು ಹಾಗೆಯೇ ಉಳಿಸುವಂತೆ ನಾವು ಮಾಡಿದ್ದ ಮನವಿಗೆ ಸ್ಪಂದನೆ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.