ಬೆಂಗಳೂರು: ಹೋರಾಟ, ಪ್ರತಿಭಟನೆಗಳನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ಸೀಮಿತಗೊಳಿಸಿ ಹೋರಾಟಗಾರರ ಹಕ್ಕು ಮೊಟಕುಗೊಳಿಸಲಾಗಿದೆ. ಈ ಕುರಿತ ಪೊಲೀಸ್ ಆಯುಕ್ತರ ಆದೇಶ–2021 ಹಿಂಪಡೆಯಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಲಾಯಿತು.
ಶಾಸಕರ ಭವನದಲ್ಲಿ ‘ಹೋರಾಟದ ಹಕ್ಕಿಗಾಗಿ ಜನಾಂದೋಲನ’ ಏರ್ಪಡಿಸಿದ್ದ ‘ಬಂದಿಖಾನೆ ಉದ್ಯಾನದಿಂದ ಬೇಕು ಸ್ವಾತಂತ್ರ್ಯ’ ಬಗೆಗಿನ ದುಂಡುಮೇಜಿನ ಸಭೆಯಲ್ಲಿ ಹೋರಾಟಗಾರರು, ಮಾನವಹಕ್ಕು ಹೋರಾಟಗಾರರು, ಸಾಹಿತಿಗಳು, ಸಂಘಟಕರು ಆಗ್ರಹಿಸಿದರು.
‘ಅಖಿಲ ಭಾರತ ನ್ಯಾಯಕ್ಕಾಗಿ ವಕೀಲರು’ ಸಂಘಟನೆಯ ಅಧ್ಯಕ್ಷೆ ಮೈತ್ರೇಯಿ, ‘2021ರಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಪರದಾಡುವಂತಾಗಿದೆ. ಮೂಲಭೂತ ಹಕ್ಕುಗಳ ರಕ್ಷಣೆಗೆ ನಡೆಸುವ ಯಾವುದೇ ಹೋರಾಟವನ್ನು ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಮಾಡಬೇಕೆಂಬ ಹಿಂದಿನ ಬಿಜೆಪಿ ಸರ್ಕಾರದ ಕಾರ್ಯ ನೀತಿಯನ್ನೇ ಈಗಿನ ಸರ್ಕಾರವೂ ಮುಂದುವರಿಸಿದೆ’ ಎಂದು ಕಿಡಿಕಾರಿದರು.
ಜನಪರ ಹೋರಾಟಗಳನ್ನು ಪೊಲೀಸರ ಮೂಲಕ ನಿಯಂತ್ರಿಸುವ ಆದೇಶವನ್ನು ಕೈಬಿಡಬೇಕು ಮತ್ತು ಬೀದಿಗಳಲ್ಲಿ ಪ್ರತಿರೋಧ ವ್ಯಕ್ತಪಡಿಸಲು ಅವಕಾಶ ನೀಡಬೇಕು. ಹೋರಾಟಗಾರರ ಮೇಲಿನ ಎಲ್ಲ ಮೊಕದ್ದಮೆ ಹಿಂಪಡೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
ಬರಹಗಾರ ಆಕಾರ್ ಪಟೇಲ್ ಮಾತನಾಡಿ, ‘ದೆಹಲಿಯ ಜಂತರ್ ಮಂತರ್ ಹೋರಾಟಗಳಿಗೆ ಸೀಮಿತವಾಗಿ ಸ್ಮಶಾನದಂತಾಗಿದೆ. ಸ್ವಾತಂತ್ರ್ಯ ಉದ್ಯಾನ ಆ ರೀತಿ ಆಗದಂತೆ ನೋಡಿಕೊಳ್ಳಬೇಕು. ಸರ್ಕಾರವು ಪ್ರತಿಭಟನಕಾರರನ್ನು ನಿಯಂತ್ರಿಸುವ ಬದಲು ಉತ್ತಮ ರಸ್ತೆ, ಸಾರಿಗೆ ವ್ಯವಸ್ಥೆ ಒದಗಿಸಲು ಗಮನಹರಿಸಬೇಕು’ ಎಂದು ಸಲಹೆ ನೀಡಿದರು.
‘ವಿಧಾನಸೌಧ, ಕಬ್ಬನ್ ಉದ್ಯಾನ, ಕೆ. ಆರ್ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಪುರಭವನ ಮುಂಭಾಗಗಳಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಇತ್ತು’ ಎಂದು ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ಸಂಚಾಲಕ ಕೆ.ವಿ.ಭಟ್ ತಿಳಿಸಿದರು.
ಸಂವಿಧಾನದಲ್ಲಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಭೆ ಸೇರುವ ಸ್ವಾತಂತ್ರ್ಯವನ್ನು ನೇರವಾಗಿ ಉಲ್ಲಂಘಿಸುವ ಪೊಲೀಸ್ ಆದೇಶ ಜನರ ಪ್ರಜಾಸತ್ತಾತ್ಮಕ ಚಟುವಟಿಕೆಗೆ ಬಹುದೊಡ್ಡ ಸವಾಲನ್ನು ಒಡ್ಡುತ್ತಿದೆ ಎಂದು ಸಾಹಿತಿ ದು.ಸರಸ್ವತಿ ಟೀಕಿಸಿದರು.
ಯಾವ ವಿಷಯಕ್ಕೆ ಹೇಗೆ ಪ್ರತಿಭಟಿಸಬೇಕು ಎಂದು ಪೊಲೀಸರು ನಿರ್ಬಂಧ ಹೇರುತ್ತಿದ್ದಾರೆ. ಇದು ಪೊಲೀಸ್ ರಾಜ್ಯದ ಸಂಕೇತ. ರಾಜಕೀಯ ರ‍್ಯಾಲಿ ಮತ್ತು ಧಾರ್ಮಿಕ ರ‍್ಯಾಲಿಗಳಿಗೆ ಅವಕಾಶ ಕಲ್ಪಿಸುವ ಪೊಲೀಸರು ಜನಪರ ಹೋರಾಟಗಾರರ ಮೇಲೆ ಮೊಕದ್ದಮೆ ಹೂಡುತ್ತಿದ್ದಾರೆ’ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಅಸಮಾಧಾನ ವ್ಯಕ್ತಪಡಿಸಿದರು.
ಲಿಂಗತ್ವ ಮತ್ತು ಲೈಂಗಿಕತೆ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಬಾಬು ಮ್ಯಾಥ್ಯೂ, ವಕೀಲರಾದ ವಿನಯ್ ಶ್ರೀನಿವಾಸ್, ನರಸಿಂಹಮೂರ್ತಿ, ಲೇಖಾ, ಹೋರಾಟಗಾರ ಮಲ್ಲು ಕುಂಬಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.