ADVERTISEMENT

ಜನಿವಾರ ಪ್ರಕರಣದಲ್ಲಿ ತಾಳ್ಮೆ ಪರೀಕ್ಷಿಸಬೇಡಿ: ಶಂಕರ ಗುಹಾ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2025, 16:13 IST
Last Updated 20 ಏಪ್ರಿಲ್ 2025, 16:13 IST
ಶಂಕರ ಗುಹಾ ದ್ವಾರಕನಾಥ್
ಶಂಕರ ಗುಹಾ ದ್ವಾರಕನಾಥ್   

ಬೆಂಗಳೂರು: ‘ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸುವ ಮೂಲಕ ಮತ್ತೆ ಈ ರೀತಿ ಘಟನೆ ಮರುಕಳಿಸದಂತೆ ಸ್ಪಷ್ಟ ಸಂದೇಶ ರವಾನಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಶಂಕರ ಗುಹಾ ದ್ವಾರಕನಾಥ್ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ಅವರು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಪತ್ರ ಬರೆದಿದ್ದಾರೆ. 

‘ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗೆ ಜನಿವಾರ ತೆಗೆಸುವ ಮೂಲಕ ಇಡೀ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಿದ ಘಟನೆ ನಡೆದಿದೆ. ಬ್ರಾಹ್ಮಣರು ಬಹುಜನಪ್ರಿಯರು ಹಾಗೂ ಅಹಿಂಸಾ ವಾದಿಗಳು. ಆದರೆ, ನಮ್ಮ ಮೇಲೆ ಇಂತಹ ಅವಮಾನಗಳನ್ನು ಮಾಡುತ್ತಲೇ ಇದ್ದಾರೆ. ಆದರೂ ಸಹಿಸಿಕೊಂಡು ಬಂದಿದ್ದೇವೆ. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಬಾರದು. ಬ್ರಾಹ್ಮಣರಿಗೆ ಯಜ್ಞೋಪವೀತ ಪರಮ ಪವಿತ್ರವಾದಂತಹ ಒಂದು ವಸ್ತು. ಇದನ್ನು ವಿನಾ ಕಾರಣ ತೆಗೆಸಿ, ಅವಮಾನ ಮಾಡಿರುವುದು ಖಂಡನೀಯ’ ಎಂದಿದ್ದಾರೆ.

ADVERTISEMENT

‘ಒಂದು ವೇಳೆ ತಪ್ಪಿತಸ್ಥರಿಗೆ ಶಿಕ್ಷೆ ಆಗದಿದ್ದರೆ, ಮತ್ತೆ ಈ ರೀತಿ ಘಟನೆ ಮರುಕಳಿಸಿದರೆ ಇಡೀ ಬ್ರಾಹ್ಮಣ ಸಮುದಾಯ ಬೀದಿಗೆ ಇಳಿದು ಹೋರಾಟ ನಡೆಸಲಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. 

‘ಹಿಜಾಬ್ ವಿಷಯದಲ್ಲಿ ನಮ್ಮ ಪಕ್ಷ ಸಾಕಷ್ಟು ಮುಂಚೂಣಿಯಲ್ಲಿತ್ತು. ಆದರೆ, ಬ್ರಾಹ್ಮಣರಿಗೆ ಅಪಮಾನವಾದಾಗ ಎಲ್ಲರೂ ಸುಮ್ಮನಿರುವುದು ನನಗೆ ಆಶ್ಚರ್ಯವನ್ನುಂಟು ಮಾಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಚ್.ಸಿ. ಮಹದೇವಪ್ಪ 
‘ಜನಿವಾರ ತೆಗೆಸಿದ್ದು ಸರಿಯಲ್ಲ’
‘ಜನಿವಾರ ಎಂಬುದು ಒಬ್ಬರ ಧಾರ್ಮಿಕ ನಂಬಿಕೆ. ಅದನ್ನು ತೆಗೆಸಿ ಪರೀಕ್ಷೆ ಬರೆಸಬೇಕೆಂಬ ನೀತಿ ಸರಿಯಲ್ಲ. ಯಾವುದೇ ಧರ್ಮವಿರಲಿ ಪ್ರತಿಯೊಬ್ಬರ ಧಾರ್ಮಿಕ ಹಕ್ಕನ್ನು ಗೌರವಿಸಬೇಕಾದದ್ದು ಸಂವಿಧಾನಾತ್ಮಕ ಕರ್ತವ್ಯ’ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.  ‘ಸಂವಿಧಾನದ ಆಶಯಗಳನ್ನು ನಾವು ಮರೆಯದೇ ವರ್ತಿಸುವುದೇ ಈ ನೆಲಕ್ಕೆ ಸಲ್ಲಿಸುವ ಮೊದಲ ಗೌರವ. ಹಿಜಾಬ್ ಸಂದರ್ಭದಲ್ಲೂ ನಮ್ಮ ನಿಲುವು ಇದೇ ಆಗಿತ್ತು. ಈಗಲೂ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.