ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ, ಮುಂದಿನ ವರ್ಷ ಭಾರತ ಸರ್ಕಾರ ನಡೆಸಲಿರುವ ಜಾತಿ ಗಣತಿ ಸಂದರ್ಭದಲ್ಲಿ ಎ.ಕೆ, ಎ.ಡಿ, ಎ.ಎ ಎಂಬುದಾಗಿ ನಮೂದಿಸದೇ ಮೂಲ ಜಾತಿಯನ್ನೇ ಬರೆಯಿಸಬೇಕು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ನಗರದಲ್ಲಿ ಶನಿವಾರ ನಡೆದ ರಾಜ್ಯ ಮಾದಿಗ ಮುಖಂಡರ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.
ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿಯ ಸಮೀಕ್ಷೆ ನಡೆದಿರುವುದರಿಂದ ಮತ್ತೆ ಹಿಂದುಳಿದ ವರ್ಗದ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕಾ ಎಂಬ ಪ್ರಶ್ನೆ ಕೆಲವರಲ್ಲಿ ಇದೆ. ಎಲ್ಲರೂ ಪಾಲ್ಗೊಳ್ಳಬೇಕು. ಸರಿಯಾದ ಮಾಹಿತಿಯನ್ನು ದಾಖಲಿಸಬೇಕು. ಹೀಗೆ ಬರೆಯಿಸುವಾಗ ಆದಿ ಕರ್ನಾಟಕ(ಎ.ಕೆ), ಆದಿ ದ್ರಾವಿಡ(ಎ.ಡಿ), ಆದಿ ಆಂಧ್ರ (ಎ.ಎ) ಎಂದು ಬರೆಯಿಸಬೇಡಿ ಎಂದರು.
ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ‘ಮಾದಿಗರು ಎಲ್ಲದರಲ್ಲಿಯೂ ಹಿಂದುಳಿದಿದ್ದು, ಜನಸಂಖ್ಯೆಯಲ್ಲಿ ಮಾತ್ರ ಮುಂದೆ ಇದ್ದಾರೆ. ನ್ಯಾ. ಸದಾಶಿವ ಆಯೋಗ, ಮಾಧುಸ್ವಾಮಿ ಉಪಸಮಿತಿ, ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿಗಳೆಲ್ಲವೂ ಇದನ್ನೇ ಹೇಳಿವೆ’ ಎಂದರು.
‘ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಬೇಕು. ದೇವದಾಸಿ ಕುಟುಂಬಗಳನ್ನು ಮುಖ್ಯವಾಹಿನಿಗೆ ತರಬೇಕು ಎಂದು ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ ಕಾರ್ಯಕ್ರಮ ರೂಪಿಸಲಾಗಿತ್ತು. ಈಗ ಅಕ್ಟೋಬರ್ 15ರಿಂದ ನವೆಂಬರ್ 5ರವರೆಗೆ ದೇವದಾಸಿ ಕುಟುಂಬಗಳ ಸಮೀಕ್ಷೆ ನಡೆಯಲಿದೆ. ಎಲ್ಲ ದೇವದಾಸಿ ಕುಟುಂಬಗಳ ವಿವರ ದಾಖಲಿಸಬೇಕು’ ಎಂದರು.
ಸಮುದಾಯದ ಮುಖಂಡ ಎಲ್. ಹನುಮಂತಯ್ಯ ಮಾತನಾಡಿ, ‘ಇಂದು ಒಳಮೀಸಲಾತಿ ಪಡೆದಿರುವ ಹಲವು ಸಮುದಾಯಗಳು ಒಳಮೀಸಲಾತಿ ಜಾರಿಗೆ ಬರಬಾರದು ಎಂದು ಪ್ರಯತ್ನಿಸಿದ್ದರು. ಯಾಕೆಂದರೆ, ಎಸ್‌ಸಿಗೆ ಮೀಸಲಾದ 1,000 ಸರ್ಕಾರಿ ಉದ್ಯೋಗಗಳಲ್ಲಿ 600ರಷ್ಟು ಮಾದಿಗರು ಇರಬೇಕಿತ್ತು. ಆದರೆ, 60 ಮಾತ್ರ ಇದ್ದಾರೆ. ಪಿಡಬ್ಲ್ಯೂಡಿಯ 400 ಎಂಜಿನಿಯರ್‌ಗಳಲ್ಲಿ 40 ಜನರಷ್ಟೇ ಮಾದಿಗರಾಗಿದ್ದಾರೆ. 1,000 ಪ್ರಾಧ್ಯಾಪಕರಲ್ಲಿ 16 ಜನರಷ್ಟೇ ಮಾದಿಗರಿದ್ದಾರೆ. ಒಳಮೀಸಲಾತಿ ಜಾರಿಗೆ ಬಂದಿರುವುದರಿಂದ ಮಾದಿಗರ ಪ್ರಮಾಣ ಹೆಚ್ಚಲಿದೆ ಎಂಬ ಕಾರಣಕ್ಕೆ ವಿರೋಧಿಸಿದ್ದರು’ ಎಂದು ಹೇಳಿದರು.
‘ಒಳಮೀಸಲಾತಿಯ ಪ್ರಯೋಜನ ಇನ್ನು ಐದು ವರ್ಷಗಳ ಒಳಗೆ ನಮ್ಮ ಸಮುದಾಯಕ್ಕೆ ಸಿಗಬೇಕು ಎಂದಿದ್ದರೆ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ’ ಎಂದು ಸಲಹೆ ನೀಡಿದರು.
ಅಲೆಮಾರಿಗಳಿಗೆ ವಿಶೇಷ ಪ್ಯಾಕೇಜ್
ಪರಿಶಿಷ್ಟ ಜಾತಿಯಲ್ಲಿರುವ ಎಲ್ಲ 101 ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಒಳಮೀಸಲಾತಿಯನ್ನು ಸರ್ಕಾರ ಜಾರಿ ಮಾಡಿದೆ. ಈ ಸಂದರ್ಭದಲ್ಲಿ ಅಲೆಮಾರಿ ಸಮುದಾಯಗಳಿಗೆ ಆಗಿರುವ ತೊಂದರೆಯನ್ನು ಸರಿಪಡಿಸಲು ವಿಶೇಷ ಪ್ಯಾಕೇಜ್ ರೂಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು. ಒಳಮೀಸಲಾತಿಗೆ ಹಿಂದೆಯೂ ಎಡರು ತೊಡರುಗಳಿದ್ದವು. ಈಗಲೂ ಇವೆ. ಅಲೆಮಾರಿಗಳಲ್ಲದೇ ಬೇರೆಯವರೂ ಹೋರಾಟ ಮಾಡುತ್ತಿದ್ದಾರೆ. ಯಾಕೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.