ಬೆಂಗಳೂರು: ‘ಮನೆ ಮನೆಗೆ ಪೊಲೀಸ್ ಎಂಬ ನೂತನ ಕಾರ್ಯಕ್ರಮವನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದು’ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.
‘ಸಾರ್ವಜನಿಕರಿಗೆ ತೊಂದರೆಯಾದ ವೇಳೆ ಪೊಲೀಸರಿಗೆ ಕರೆ ಮಾಡಿ ತಿಳಿಸಬಹುದು. ಅವರೇ ಸ್ಥಳಕ್ಕೆ ತೆರಳಿ ಸಮಸ್ಯೆ ಆಲಿಸಲಿದ್ದಾರೆ’ ಎಂದು ಹೇಳಿದರು.
‘ಪೊಲೀಸರು ಶಾಲಾ– ಕಾಲೇಜುಗಳಿಗೆ ಭೇಟಿ ನೀಡಬೇಕು. ಪೋಷಕರ ಸಭೆಗಳಲ್ಲೂ ಪೊಲೀಸರು ಭಾಗವಹಿಸಬೇಕು’ ಎಂದು ಸೂಚನೆ ನೀಡಿದರು
‘ಮಂಡ್ಯದ ಮದ್ದೂರಿನಲ್ಲಿ ಮಗು ಸಾವಿಗೀಡಾದ ದುರ್ಘಟನೆಯು ದುರದೃಷ್ಟಕರ. ಈ ಘಟನೆಯಿಂದ ಪೊಲೀಸ್ ಇಲಾಖೆ ತಲೆತಗ್ಗಿಸುವಂತಾಗಿದೆ. ಸಾರ್ವಜನಿಕರ ವಲಯದಲ್ಲಿ ಇಂತಹ ಘಟನೆಗಳು ಆಗಬಾರದು. ಇದಕ್ಕೆ ಕಾರಣರಾದ ಪೊಲೀಸರನ್ನು ಅಮಾನತು ಮಾಡಲಾಗಿದೆ. ಅವರ ವಿರುದ್ಧ ಶಿಸ್ತು ಕ್ರಮಕ್ಕೂ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.
‘ಪೊಲೀಸರು ಸ್ವಲ್ಪ ಮುಂಜಾಗ್ರತೆ ವಹಿಸಿದ್ದರೆ ಮದ್ದೂರಿನ ಘಟನೆಯಲ್ಲಿ ಮಗು ಸಾಯುತ್ತಿರಲಿಲ್ಲ’ ಎಂದು ಹೇಳಿದರು.
‘ಪೊಲೀಸರು ತಪಾಸಣೆ ವೇಳೆ ಮಾರ್ಗಸೂಚಿಗಳನ್ನು ಪಾಲಿಸಬೇಕು. ಕೆಲವು ಪೊಲೀಸರು ಮರೆಯಲ್ಲಿ ನಿಂತುಕೊಂಡಿದ್ದು ಏಕಾಏಕಿ ರಸ್ತೆಗಿಳಿದು ವಾಹನ ನಿಲುಗಡೆ ಮಾಡುತ್ತಾರೆ. ಈ ರೀತಿ ಮಾಡಬಾರದು’ ಎಂದು ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.