ADVERTISEMENT

ಡಬಲ್ ಡೆಕ್ಕರ್‌ ಮೇಲ್ಸೇತುವೆ ಕಾಮಗಾರಿ ಬಹುತೇಕ ಅಂತಿಮ

ಮಾರ್ಚ್‌ನಲ್ಲಿ ಸೇವೆಗೆ ಲಭ್ಯ: ಬಿಎಂಆರ್‌ಸಿಎಲ್ ನಿರೀಕ್ಷೆ

ವಿಜಯಕುಮಾರ್ ಎಸ್.ಕೆ.
Published 1 ಜನವರಿ 2023, 21:07 IST
Last Updated 1 ಜನವರಿ 2023, 21:07 IST
ಸಿಲ್ಕ್‌ಬೋರ್ಡ್ ಮೆಟ್ರೊ ರೈಲು ನಿಲ್ದಾಣದ ಬಳಿ ಡಬಲ್ ಡೆಕ್ಕರ್ ಮಾರ್ಗದ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿರುವುದು–ಪ್ರಜಾವಾಣಿ ಚಿತ್ರ/ಕಿಶೋರ್‌ಕುಮಾರ್‌ ಬೋಳಾರ್
ಸಿಲ್ಕ್‌ಬೋರ್ಡ್ ಮೆಟ್ರೊ ರೈಲು ನಿಲ್ದಾಣದ ಬಳಿ ಡಬಲ್ ಡೆಕ್ಕರ್ ಮಾರ್ಗದ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿರುವುದು–ಪ್ರಜಾವಾಣಿ ಚಿತ್ರ/ಕಿಶೋರ್‌ಕುಮಾರ್‌ ಬೋಳಾರ್   

ಬೆಂಗಳೂರು: ‘ನಮ್ಮ ಮೆಟ್ರೊ’ದಲ್ಲಿ ಇದೇ ಮೊದಲ ಬಾರಿಗೆ ನಿರ್ಮಾಣಗೊಳ್ಳುತ್ತಿರುವ ‘ಡಬಲ್‌ ಡೆಕ್ಕರ್’ ಮೇಲ್ಸೇತುವೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮಾರ್ಚ್‌ನಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಬಿಎಂಆರ್‌ಸಿಎಲ್(ಬೆಂಗಳೂರು ಮೆಟ್ರೊ ರೈಲು ನಿಗಮ) ಅಂದಾಜಿಸಿದೆ.

ಎರಡನೇ ಹಂತದ ಮೆಟ್ರೊ ರೈಲು ಯೋಜನೆಯಲ್ಲಿ ಆರ್.ವಿ. ರಸ್ತೆ–ಬೊಮ್ಮಸಂದ್ರ ಮಾರ್ಗದಲ್ಲಿ ಬಸ್‌ ಹಾಗೂ ಮೆಟ್ರೊ ರೈಲು ಸಂಚರಿಸುವ ರೀತಿಯಲ್ಲಿ ಈ ಮೇಲ್ಸೇತುವೆ ನಿರ್ಮಿಸಲಾಗಿದೆ. ಒಂದೇ ಪಿಲ್ಲರ್‌ಗೆ ರೋಡ್ ಕಂ ರೇಲ್‌(ಡಬಲ್ ಡೆಕ್ಕರ್) ಸೇತುವೆ ನಿರ್ಮಿಸಲಾಗುತ್ತಿದೆ.

ಮೊದಲ ಮಟ್ಟದಲ್ಲಿ ಎರಡೂ ಬದಿಗಳಲ್ಲಿ ಎರಡು ರಸ್ತೆ ಮಾರ್ಗ ನಿರ್ಮಿಸಲಾಗಿದ್ದು, ಇಲ್ಲಿ ಬಸ್‌, ಕಾರು ಸೇರಿ ಎಲ್ಲಾ ರೀತಿಯ ವಾಹನಗಳು ಸಂಚರಿಸಲಿವೆ. ಎರಡನೇ ಮಟ್ಟದ ಮಾರ್ಗದಲ್ಲಿ ಮೆಟ್ರೊ ರೈಲು ಸಂಚರಿಸಲಿದೆ. ಅಲ್ಲದೆ, ನೆಲದಲ್ಲಿರುವ ರಸ್ತೆಯಲ್ಲಿ ಸದ್ಯ ಇರುವ ತ್ರಿಪಥ ರಸ್ತೆ ಮಾರ್ಗವೂ ಇರಲಿದೆ.

ADVERTISEMENT

ಮೆಟ್ರೊ ಕಂಬಕ್ಕೆ ಎರಡೂ ಬದಿಯಲ್ಲಿ ರೆಕ್ಕೆಗಳ ರೀತಿಯಲ್ಲಿ ಸೇತುವೆಗಳನ್ನು ಅಳವಡಿಸಲಾಗಿದೆ. ಆರ್.ವಿ. ರಸ್ತೆಯಿಂದ ಮಾರೇನಹಳ್ಳಿ, ರಾಗಿಗುಡ್ಡ ಮತ್ತು ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ನಡುವೆ 3.3 ಕಿ.ಮೀ. ಉದ್ದ ಈ ಡಬಲ್‌ ಡೆಕ್ಕರ್‌ ಮೇಲ್ಸೇತುವೆ ನಿರ್ಮಾಣವಾಗಿದೆ.

ಇಷ್ಟು ಉದ್ದದ ಡಬಲ್ ಡೆಕ್ಕರ್ ಮಾರ್ಗದ ಮೇಲೆ ಬಸ್‌ಗಳು ಅಥವಾ ಬೇರೆ ವಾಹನಗಳು ಒಮ್ಮೆ ಹತ್ತಿದರೆ ಮಧ್ಯದಲ್ಲಿ ಇಳಿಯಲು ಅವಕಾಶ ಇಲ್ಲ. ಈ ರಸ್ತೆಯಲ್ಲಿ ಇರುವ ವಾಹನ ದಟ್ಟಣೆ ಕಡಿಮೆ ಮಾಡಲು ಇದು ನೆರವಾಗಲಿದೆ. ಸಿಗ್ನಲ್‌ರಹಿತ ಸಂಚಾರಕ್ಕೆ ಅನುಕೂಲ ಆಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ನಿಗದಿಯಂತೆ 2021ರ ಅಕ್ಟೋಬರ್‌ನಲ್ಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಲೂಪ್‌ಗಳ ನಿರ್ಮಾಣ ಕಾಮಗಾರಿ ಬಾಕಿ ಇದ್ದು, ಈಗಷ್ಟೇ ಆರಂಭವಾಗಿರುವ ಕೆಲಸ ಮೂರು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ವಿವರಿಸಿದರು.

ಜಯದೇವ ಜಂಕ್ಷನ್‌ನಲ್ಲಿ ನೆಲದ ಅಡಿಯಲ್ಲಿ ಸುರಂಗದಲ್ಲಿ ಪಿಂಕ್ ಮೆಟ್ರೊ ರೈಲು ಮಾರ್ಗ(ಗೊಟ್ಟಿಗೆರೆ–ನಾಗವಾರ), ಅದರ ಮೇಲೆ ರಸ್ತೆ ಮತ್ತು ಹಳದಿ ಮೆಟ್ರೊ ರೈಲು ಮಾರ್ಗ ಹಾದು ಹೋಗುತ್ತಿದೆ. ರಸ್ತೆ, ಮೆಟ್ರೊ ನಿಲ್ದಾಣಗಳನ್ನು ಒಳಗೊಂಡಿರುವ ಮೊದಲ ನಿಲ್ದಾಣ ಇದಾಗಲಿದೆ. ನಮ್ಮ ಮೆಟ್ರೊದ ಬೇರೆ ಯಾವುದೇ ಮಾರ್ಗದಲ್ಲಿ ಹೀಗೆ ಒಂದರ ಮೇಲೊಂದು ಮಾರ್ಗ ನಗರದಲ್ಲಿ ಇಲ್ಲ. ಆದ್ದರಿಂದ ಹಳದಿ ಮಾರ್ಗವು ಹಲವು ವಿಶೇಷಗಳನ್ನು ಒಳಗೊಂಡಿದೆ.

ಗಟ್ಟಿಮುಟ್ಟಾದ ಸೇತುವೆ: ಭಾರಿ ವಾಹನಗಳಿಗೂ ‌ಅವಕಾಶ

ಐಆರ್‌ಸಿ–6 ದರ್ಜೆಯ ಮೇಲ್ಸೇತುವೆ ನಿರ್ಮಿಸಲಾಗಿದ್ದು, ಲಘು ವಾಹನಗಳಷ್ಟೇ ಅಲ್ಲದೇ ಭಾರಿ ವಾಹನಗಳ ಸಂಚಾರಕ್ಕೂ ಅವಕಾಶ ಇರಲಿದೆ. ನೆಲದಿಂದ 8 ಮೀಟರ್ ಎತ್ತರದಲ್ಲಿ ಸೇತುವೆ ನಿರ್ಮಾಣವಾಗಿದ್ದು, ಅದರ ಮೇಲೆ 5.5 ಮೀಟರ್ ಎತ್ತರದಲ್ಲಿ ಮೆಟ್ರೊ ರೈಲು ಮಾರ್ಗ ನಿರ್ಮಾಣವಾಗಿದೆ.

ಈ ರೀತಿ ಡಬಲ್ ಡೆಕ್ಕರ್ ಮಾರ್ಗವು ದಕ್ಷಿಣ ಭಾರತದಲ್ಲೇ ಮೊದಲು ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಮುಂಬೈ, ಜೈಪುರ ಮತ್ತು ನಾಗಪುರದಲ್ಲಿ ಈ ರೀತಿಯ ಮಾರ್ಗಗಳು ಈಗಾಗಲೇ ಇವೆ.

ಅಂಕಿ–ಅಂಶ

3.3 ಕಿ.ಮೀ.
ಡಬಲ್ ಡೆಕ್ಕರ್ ಮೇಲ್ಸೇತುವೆ ಉದ್ದ

5.5 ಮೀಟರ್‌
ಮೆಟ್ರೊ ಮಾರ್ಗ ಮತ್ತು ಬಸ್‌ ಮಾರ್ಗದ ನಡುವಿನ ಅಂತರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.