ಬೆಂಗಳೂರು: ನಗರಗಳಲ್ಲಿ ಸಂಚಾರ ದಟ್ಟಣೆ, ಪರಿಸರ ಮಾಲಿನ್ಯ ತಗ್ಗಿಸಿ ಸುರಕ್ಷತೆಯಿಂದ ಜನರು ಸಂಚರಿಸಲು ಪೂರಕವಾಗುವಂತೆ ದೇಶದಾದ್ಯಂತ ಆರಂಭವಾಗಿರುವ ಡಬಲ್ ದಿ ಬಸ್ ಎನ್ನುವ ಮೂರು ದಿನದ ಅಭಿಯಾನ ಬೆಂಗಳೂರಿನಲ್ಲೂ ಶುರುವಾಗಿದೆ.
ಸೋಮವಾರ ʻವಿಶ್ವ ಕಾರು ಮುಕ್ತ ದಿನʼವೂ ಹೌದು. ಈ ದಿನವೇ ಶುರುವಾದ ಆಂದೋಲನದಲ್ಲಿ, ಬಸ್‌ಗಳು ಕೇವಲ ಸಾರಿಗೆ ಸಾಧನಗಳಲ್ಲ. ಅವು ಸಮಾನತೆ, ಹವಾಮಾನ ಸುಸ್ಥಿರತೆ ಮತ್ತು ದಟ್ಟಣೆ ಮುಕ್ತವಾಗಿ ನಗರಗಳು ರೂಪುಗೊಳ್ಳಲು ಸಹಕಾರಿಯಾಗಲಿವೆ ಎನ್ನುವ ಅಂಶವನ್ನು ಪ್ರಯಾಣಿಕರಿಗೆ ತಿಳಿಸಿಕೊಡಲಾಯಿತು.
ನಗರದ ಕಮ್ಮನಹಳ್ಳಿ ಜಲವಾಯು ವಿಹಾರ ಮತ್ತು ಅಗರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು, ನಾಗರಿಕರು ಮತ್ತು ವಿವಿಧ ನಾಗರಿಕ ಸೇವಾ ಸಂಸ್ಥೆಗಳ ಸದಸ್ಯರು ಫಲಕಗಳನ್ನು ಹಿಡಿದು ಡಬಲ್ ದಿ ಬಸ್ ಜಾಗೃತಿ ಮೂಡಿಸಿದರು.
'ಬಿಎಂಟಿಸಿಯಲ್ಲಿ ನಿತ್ಯ 42 ಲಕ್ಷಕ್ಕೂ ಹೆಚ್ಚು ಮಂದಿ ಸಂಚರಿಸುತ್ತಾರೆ. ಆದರೆ, ಬಸ್‌ಗಳ ಸಂಖ್ಯೆ ಕಡಿಮೆ ಇದೆ. ಸರ್ಕಾರ ಬಸ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿ ಪ್ರಯಾಣಿಕರಿಗೆ ಸುರಕ್ಷಿತ, ವಿಶ್ವಾಸಾರ್ಹ, ಪರಿಸರ-ಸ್ನೇಹಿ ಸಾರಿಗೆ ವ್ಯವಸ್ಥೆ ಒದಗಿಸಬೇಕು' ಎಂದು ಅಭಿಯಾನದಲ್ಲಿ ಭಾಗಿಯಾಗಿದ್ದ ಹೆಚ್‌ಎಸ್‌ಆರ್ ಲೇಔಟ್ ಸಮುದಾಯ ಕಾರ್ಯಪಡೆಯ ಸ್ವಯಂಸೇವಕ ಸಚಿನ್ ಪಂಡಿತ್ ಹೇಳಿದರು.
ಕೇಂದ್ರ ನಗರಾಭಿವೃದ್ದಿ ಹಾಗೂ ಸಾರಿಗೆ ಸಚಿವಾಲಯ ಸಮೀಕ್ಷೆ ನಡೆಸಿ ನಿಗದಿಪಡಿಸಿರುವ ಮಾನದಂಡದ ಪ್ರಕಾರ ಪ್ರತಿ ನಗರದಲ್ಲಿ 1 ಲಕ್ಷ ಪ್ರಯಾಣಿಕರಿಗೆ ಕನಿಷ್ಠ 60 ನಗರ ಸಾರಿಗೆ ಬಸ್‌ಗಳಾದರೂ ಇರಬೇಕು. ಭಾರತದಲ್ಲಿ ಈ ಮಾನದಂಡದಂತೆ ಯಾವ ನಗರದಲ್ಲೂ ಇಷ್ಟೊಂದು ಬಸ್‌ಗಳೇ ಇಲ್ಲ. ಎಲ್ಲಾ ನಗರಗಳ ಸರಾಸರಿ ಬಸ್ ಸೇವೆಯ ಪ್ರಮಾಣ 12ರಷ್ಟು ಮಾತ್ರ ಇದೆ.
2031ರ ಒಳಗೆ ನಗರ ಸಾರಿಗೆ ಬಸ್‌ಗಳನ್ನು ಎರಡು ಪಟ್ಟು ಹೆಚ್ಚಿಸಬೇಕು ಎನ್ನುವ ಆಶಯದೊಂದಿಗೆ ವಿವಿಧ ಸ್ವಯಂ ಸೇವಾ ಸಂಘಟನೆಗಳು ಡಬಲ್ ದಿ ಬಸ್ ಎನ್ನುವ ಅಭಿಯಾನವನ್ನು ಪ್ರಮುಖ ನಗರಗಳ ಜತೆಗೆ ಸಾಮಾಜಿಕ ಮಾಧ್ಯಮದ ಮೂಲಕವೂ ನಡೆಸಲಾಗುತ್ತಿದೆ.
ನೀವೂ ಭಾಗಿಯಾಗಬಹುದು ಹೆಚ್ಚಿನ ವಿವರಗಳ ಜತೆಗೆ ಅಭಿಯಾನದಲ್ಲಿ ಭಾಗಿಯಾಗಲು https://doublethebus.in/ ಬಳಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.