ವರದಕ್ಷಿಣೆ- ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಪ್ರೀತಿಸಿ ಮದುವೆಯಾದ ಬಳಿಕ ಸಂಸಾರಕ್ಕೆ ಹೊಸ ಮನೆ ಮಾಡುವುದಾಗಿ ಹಣ, ಚಿನ್ನ ಪಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವ ಪತಿ ಹಾಗೂ ಅವರ ಕುಟುಂಬದವರ ವಿರುದ್ಧ ಪಶ್ಚಿಮ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದಾರೆ.
ಸಂತ್ರಸ್ತೆ ದೂರು ಆಧರಿಸಿ, ಪತಿ ಹೇಮಂತ್ ಕುಮಾರ್, ಅತ್ತೆ ಶಿವಶಂಕರಿ, ಪತಿಯ ಅಣ್ಣ ಶಶಿಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕುಣಿಗಲ್ ಮೂಲದ ಸಂತ್ರಸ್ತೆ, ನಗರದ ಮಾಲ್‌ವೊಂದರಲ್ಲಿ ಕೆಲಸ ಮಾಡುವ ವೇಳೆ ಹೇಮಂತ್ ಪರಿಚಯವಾಗಿ ಪರಸ್ಪರ ಪ್ರೀತಿಸಿ ಫೆಬ್ರುವರಿಯಲ್ಲಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಬಳಿಕ ಸ್ನೇಹಿತನ ಕೊಠಡಿಯಲ್ಲಿ ಇಬ್ಬರೂ ಸಂಸಾರ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
‘ಮದುವೆಯಾದ ದಿನದಿಂದ ಪತಿ ನಿತ್ಯ ನನ್ನ ಜತೆ ಗಲಾಟೆ ಮಾಡುತ್ತಿದ್ದರು. ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ. ಅತ್ತೆ ಹಾಗೂ ಮೈದುನ ಸಹ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಹೊಸ ಮನೆ ಮಾಡುವುದಾಗಿ ₹1.5 ಲಕ್ಷ ನಗದು ಮತ್ತು 15 ಗ್ರಾಂ ಚಿನ್ನ ಪಡೆದುಕೊಂಡ ಬಳಿಕ ಹೇಮಂತ್ ಕುಮಾರ್ ನನ್ನನ್ನು ದೂರ ಮಾಡಿದ್ದಾನೆ’ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
‘ಹೇಮಂತ್ ಕುಟುಂಬದವರು ವರದಕ್ಷಿಣೆ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ. ಗರ್ಭಿಣಿ ಎಂದು ಗೊತ್ತಿದ್ದರೂ ಮನೆಯಿಂದ ಹೊರ ಹಾಕಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.