ಬೆಂಗಳೂರು: ‘ನಾಡು–ನುಡಿಗೆ ಸಂಕಷ್ಟ ಎದುರಾದಾಗಲೆಲ್ಲ ವರನಟ ರಾಜ್‌ಕುಮಾರ್ ಅವರು ಕನ್ನಡಿಗರ ಪರ ನಿಂತು, ಧ್ವನಿಯಾಗುತ್ತಿದ್ದರು. ಆದರೆ, ಈಗಿನ ನಟರು ಕನ್ನಡ ಭಾಷೆಗೆ ಸಂಕಷ್ಟ ಬಂದರೂ ಮುಂದೆ ಬರುತ್ತಿಲ್ಲ’ ಎಂದು ಶಾಸಕ ರಿಜ್ವಾನ್ ಅರ್ಷದ್ ಬೇಸರ ವ್ಯಕ್ತಪಡಿಸಿದರು.
ಡಾ.ರಾಜ್‍ಕುಮಾರ್ ಪ್ರತಿಷ್ಠಾನದ ಸಹಯೋಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜ್‍ಕುಮಾರ್ ಅವರ 97ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
‘ಈಗಿನ ಸೂಪರ್ ಸ್ಟಾರ್‌ಗಳು ರಾಜ್‌ಕುಮಾರ್ ಆಗಲು ಸಾಧ್ಯವಿಲ್ಲ. ರಾಜ್‌ಕುಮಾರ್ ಕನ್ನಡಿಗರಾದದ್ದು ನಮ್ಮ ಅದೃಷ್ಟ. ಅವರನ್ನು ಕೇವಲ ಒಬ್ಬ ನಟರನ್ನಾಗಿ ನೋಡಲು ಸಾಧ್ಯವಿಲ್ಲ. ಅವರು ಈ ನಾಡಿನ ಸಾಂಸ್ಕೃತಿಕ ಲೋಕದ ಪ್ರತಿನಿಧಿಯಾಗಿದ್ದರು. ಅಭಿನಯದಲ್ಲಿ ನೈಜತೆ ಕಾಪಾಡಿಕೊಂಡಿದ್ದ ಅವರು, ಕನ್ನಡಕ್ಕೆ ಸಂಕಷ್ಟ ಎದುರಾದಗಲೆಲ್ಲ ಧ್ವನಿ ಎತ್ತುತ್ತಿದ್ದರು. ಈಗ ಚಿತ್ರರಂಗದಲ್ಲಿ ಅಂತಹವರು ಕಾಣಸಿಗುವುದಿಲ್ಲ. ನಟರೆನಿಸಿಕೊಂಡವರು ಕೇವಲ ಹೇಳಿಕೆ ನೀಡಿ ಸುಮ್ಮನಾಗುತ್ತಾರೆ. ರಾಜ್‌ಕುಮಾರ್ ಅವರು ಅಗಲಿ ಹಲವು ವರ್ಷಗಳಾದರೂ ಇವತ್ತಿಗೂ ತಮ್ಮ ನಟನೆ ಮೂಲಕ ನಮ್ಮ ನಡುವೆ ಬದುಕಿದ್ದಾರೆ’ ಎಂದರು.
ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್, ‘ಅಪ್ಪಾಜಿ ಅವರು ಇನ್ನೂ ಹತ್ತು ವರ್ಷಗಳು ನಮ್ಮ ಜತೆಗೆ ಇರಬೇಕೆಂಬ ಆಸೆಯಿತ್ತು. ಆಸ್ಪತ್ರೆಯ ಹಾಸಿಗೆ ಮೇಲೆ, ಗಾಲಿ ಕುರ್ಚಿಯ ಮೇಲೆ ಇರುವ ನೆನಪುಗಳನ್ನು ಬಿಟ್ಟು ಹೋಗಬಾರದೆಂಬ ಭಾವನೆ ಅವರಲ್ಲಿತ್ತು. ಅವರು ನಮ್ಮ ನಡುವೆ ಸುಂದರ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ’ ಎಂದು ಹೇಳಿದರು.
ನಿರ್ಮಾಪಕ ಎಸ್. ನಾರಾಯಣ್, ‘ರಾಜ್‌ಕುಮಾರ್ ಅವರು ಎಷ್ಟೇ ಎತ್ತರಕ್ಕೆ ಏರಿದರೂ ತಮ್ಮತನವನ್ನು ಬಿಟ್ಟುಕೊಡಲಿಲ್ಲ. ಅವರಿಗೆ ಸಿಕ್ಕಂತಹ ಪಾತ್ರಗಳು ಯಾವುದೇ ಕಲಾವಿದನಿಗೆ ಸಿಗಲು ಸಾಧ್ಯವಿಲ್ಲ. ಪಾತ್ರಗಳೇ ಅವರನ್ನು ಹುಡುಕಿಕೊಂಡು ಬಂದವು. ಅವರು ತಾವೊಂದೆ ಬೆಳೆಯದೆ ಚಿತ್ರೋದ್ಯಮ ಬೆಳೆಸಿದರು. ಅವರು ಕಟ್ಟಿದ ಚಿತ್ರರಂಗವನ್ನು ನಾವು ಕೆಡವುತ್ತಿದ್ದೇವೆ. ಈಗ ಚಿತ್ರರಂಗ ದುಃಸ್ಥಿತಿಯಲ್ಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ, ‘ಭಾಷೆ, ಸಂಸ್ಕೃತಿ, ನೆಲ–ಜಲಕ್ಕಾಗಿ ದುಡಿದ ನಾಯಕರು ರಾಜ್‌ಕುಮಾರ್. ಎಷ್ಟೋ ಕಲಾವಿದರು ಅವರ ಗೀತೆಗಳನ್ನು ಹಾಡಿ, ಬದುಕುತ್ತಿದ್ದಾರೆ. ನನಗೆ ಅವರ ಜತೆಗೆ ಅಭಿನಯಿಸುವ ಅವಕಾಶ ಸಿಗಲಿಲ್ಲ ಎಂಬ ಕೊರಗಿದೆ’ ಎಂದರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ‘ಕನ್ನಡ ಕಲಿಕೆಗೆ ರಾಜ್‌ಕುಮಾರ್ ಅವರ ಸಿನಿಮಾ ಸಹಕಾರಿಯಾಯಿತು’ ಎಂದು ಸ್ಮರಿಸಿಕೊಂಡರು.
ಇದಕ್ಕೂ ಮೊದಲು ರಾಜ್‌ಕುಮಾರ್ ಅವರ ಗೀತೆಗಳ ಗಾಯನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.