ADVERTISEMENT

ಸಾಮಾಜಿಕ ನ್ಯಾಯ ಮಾಯವಾಗಿದೆ: ಡಾ.ವಸುಂಧರಾ ಭೂಪತಿ

‘ಕರ್ನಾಟಕದಲ್ಲಿ ಮಹಿಳಾ ಚಳವಳಿಯ ನೆಲೆ – ಹಿನ್ನೆಲೆ’ ವಿಚಾರಗೋಷ್ಠಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 20:00 IST
Last Updated 9 ಜೂನ್ 2022, 20:00 IST
‘ಕರ್ನಾಟಕದಲ್ಲಿ ಮಹಿಳಾ ಚಳವಳಿಯ ನೆಲೆ–ಹಿನ್ನೆಲೆ’ ಕುರಿತ ವಿಚಾರಗೋಷ್ಠಿಯಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ.ಎಸ್. ವಿಮಲಾ ಮಾತನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ, ಚಿಂತಕರಾದ ಡಾ.ಎನ್. ಗಾಯತ್ರಿ, ಲೇಖಕಿ ಡಾ.ವಸುಂಧರಾ ಭೂಪತಿ ಮತ್ತು ಸಂಘಟನೆಯ ಅಧ್ಯಕ್ಷರಾದ ದೇವಿ ಇದ್ದಾರೆ     – ಪ್ರಜಾವಾಣಿ ಚಿತ್ರ
‘ಕರ್ನಾಟಕದಲ್ಲಿ ಮಹಿಳಾ ಚಳವಳಿಯ ನೆಲೆ–ಹಿನ್ನೆಲೆ’ ಕುರಿತ ವಿಚಾರಗೋಷ್ಠಿಯಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ.ಎಸ್. ವಿಮಲಾ ಮಾತನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ, ಚಿಂತಕರಾದ ಡಾ.ಎನ್. ಗಾಯತ್ರಿ, ಲೇಖಕಿ ಡಾ.ವಸುಂಧರಾ ಭೂಪತಿ ಮತ್ತು ಸಂಘಟನೆಯ ಅಧ್ಯಕ್ಷರಾದ ದೇವಿ ಇದ್ದಾರೆ     – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದಲ್ಲಿ ಜನಸಾಮಾನ್ಯರು ಅಪಾಯಕಾರಿ ಸನ್ನಿವೇಶದಲ್ಲಿ ಬದುಕುತ್ತಿದ್ದಾರೆ. ಸಾಮಾಜಿಕ ನ್ಯಾಯ ಮಾಯವಾಗಿದೆ’ ಎಂದು ಲೇಖಕಿ ಡಾ.ವಸುಂಧರಾ ಭೂಪತಿ ಅವರು ಆತಂಕದಿಂದ ನುಡಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಕರ್ನಾಟಕದಲ್ಲಿ ಮಹಿಳಾ ಚಳವಳಿಯ ನೆಲೆ-ಹಿನ್ನೆಲೆ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಮಹಿಳೆಯರನ್ನು ಮತ್ತೆ ನಾಲ್ಕು ಗೋಡೆಗಳ ನಡುವೆ ಬಂಧಿಸಿಡುವ ಹುನ್ನಾರಗಳು ನಡೆಯುತ್ತಿವೆ. ಕೋವಿಡ್‌ ನಂತರದ ದಿನಗಳಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿವೆ. ಶಾಲಾ, ಕಾಲೇಜುಗಳಿಂದ ದೂರ ಉಳಿಯುವ ಹೆಣ್ಣು ಮಕ್ಕಳ ಸಂಖ್ಯೆಯೂ ಏರಿಕೆ
ಕಂಡಿದೆ. ಮುಸ್ಲಿಂ ಹೆಣ್ಣುಮಕ್ಕಳು ತಲೆಗೆ ಬಟ್ಟೆ ಕಟ್ಟಿಕೊಳ್ಳುತ್ತಿದ್ದರು. ಅದಕ್ಕೂ ವಿರೋಧ ವ್ಯಕ್ತಪಡಿಸಲಾಯಿತು. ಸಮಾಜವು ಎತ್ತ ಸಾಗುತ್ತಿದೆ’ ಎಂದು ಪ್ರಶ್ನಿಸಿದರು.

ADVERTISEMENT

‘ರಾಜ್ಯವು ಶಾಂತಿಯ ತೋಟದಂತೆ ಇತ್ತು. ಎಲ್ಲರ ಪಾಲಿಗೂ ಸುರಕ್ಷಿತ ತಾಣವಾಗಿತ್ತು. ಇಂತಹ ತಿಳಿಯಾದ ಕೊಳಕ್ಕೆ ಕಲ್ಲು ಎಸೆಯುತ್ತಿದ್ದಾರೆ. ಮಹಿಳೆಯರು ಇನ್ನಷ್ಟು ಶಕ್ತಿಯುತವಾಗಿ, ಜಾಗೃತಿಯಿಂದ ಇರಬೇಕು’ ಎಂದು ಹೇಳಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ.ಎಸ್‌.ವಿಮಲಾ, ‘ಸ್ವಾತಂತ್ರ್ಯವು ಎಲ್ಲರಿಗೂ ಸಮಾನತೆ ತರಲಿದೆ ಎಂಬ ಉದ್ದೇಶದೊಂದಿಗೆ ಸ್ವಾತಂತ್ರ್ಯ ಚಳವಳಿ ನಡೆದಿತ್ತು. ಆದರೆ, ಅಸಮಾನತೆ ಮುಂದುವರಿದಿದೆ. ಕಳೆದ 40 ವರ್ಷದಿಂದ ಜನವಾದಿ ಸಂಘಟನೆಯು ವರದಕ್ಷಿಣೆ ಕಿರುಕುಳ, ಬಾಲ್ಯವಿವಾಹದ ವಿರುದ್ಧ ಹೋರಾಟ ನಡೆಸಿಕೊಂಡು ಬರುತ್ತಿದೆ. ಧರ್ಮ, ಕೋಮು ಹೆಸರಿನಲ್ಲಿ ಸಂಘರ್ಷಗಳು ನಡೆಯುತ್ತಿರುವುದು ದುರಂತ’ ಎಂದು ವಿಷಾದಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ದೇವಿ ಅಧ್ಯಕ್ಷತೆ ವಹಿಸಿದ್ದರು. ವಿಚಾರಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಸಹ ಕಾರ್ಯದರ್ಶಿ ವಿಜಯಕುಮಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ, ಖಜಾಂಚಿ ಲಲಿತಾ ಶೆಣೈ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.