ಕಾರ್ಯಕ್ರಮದಲ್ಲಿ ಕಾಳೇಗೌಡ ನಾಗವಾರ ಅವರನ್ನು ಕೆ.ಎಂ. ಗಾಯಿತ್ರಿ ಗೌರವಿಸಿದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಹಿಂದೂ ಧರ್ಮದಲ್ಲಿ ಈಗಲೂ ಜಾತಿ–ಲಿಂಗ ಭೇದವಿದೆ. ದಲಿತ ಮಹಿಳೆ ಎಂಬ ಕಾರಣಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಕೆಲ ದೇವಸ್ಥಾನಗಳಲ್ಲಿ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ’ ಎಂದು ಸಾಹಿತಿ ಕಾಳೇಗೌಡ ನಾಗವಾರ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಮಾತನಾಡಿದರು.
ದೇವಸ್ಥಾನಗಳಲ್ಲಿ ವಿಧಿಸಲಾಗುತ್ತಿರುವ ನಿರ್ಬಂಧಗಳ ಬಗ್ಗೆ ಪ್ರಸ್ತಾಪಿಸಿದ ಅವರು, ‘ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದರೂ, ಅವರು ಪಾರ್ಸಿ ಹಾಗೂ ವಿಧವೆ ಎಂಬ ಕಾರಣಕ್ಕೆ ದೇವಸ್ಥಾನದೊಳಗೆ ಸೇರಿಸಿಕೊಳ್ಳಲಿಲ್ಲ. ಹಿಂದೂ ದೇವಾಲಯಗಳ ಪ್ರವೇಶದ ವೇಳೆ ರಾಜೀವ್ ಗಾಂಧಿ ಅವರಿಗೂ ಇದೇ ಅನುಭವವಾಗಿತ್ತು’ ಎಂದರು.
‘ಅಮೆರಿಕದ ಮಹಿಳೆಯೊಬ್ಬರು ಉಡುಪಿಯ ಪ್ರಾಧ್ಯಾಪಕರನ್ನು ವಿವಾಹವಾಗಿದ್ದರು. ಆ ಮಹಿಳೆ ಹಿಂದೂ ಧರ್ಮದ ಮೇಲೆ ಪ್ರೀತಿ ಹಾಗೂ ಗೌರವ ಹೊಂದಿದ್ದರು. ಒಡಿಶಾದ ಲಿಂಗರಾಜ ದೇವಸ್ಥಾನ ನೋಡಲು ತೆರಳಿದ್ದ ಅವರು, ಭಾರತೀಯ ನಾರಿಯಂತೆ ಉಡುಪು ಧರಿಸಿದ್ದರು. ಅವರನ್ನು ದೇವಸ್ಥಾನದ ಪ್ರವೇಶ ದ್ವಾರದಲ್ಲಿಯೇ ತಡೆಯಲಾಯಿತು. ಇದಕ್ಕೆ ಕಾರಣ ಅವರ ಬಣ್ಣ ಮತ್ತು ಧರ್ಮ. ಪುರೋಹಿತರಿಗೆ ಎಷ್ಟೇ ಮನವರಿಕೆ ಮಾಡಿಸಿದರೂ ಅವರು ಪ್ರವೇಶಕ್ಕೆ ಅವಕಾಶ ನೀಡಲಿಲ್ಲ’ ಎಂದು ಸ್ಮರಿಸಿಕೊಂಡರು.
‘ಶಿವನ ಹೆಸರಿನಲ್ಲಿ ಅಸ್ಪೃಶ್ಯತೆ, ಹೆಣ್ಣು–ಗಂಡು ಎಂಬ ಭೇದ ಭಾವ ಇರಬಾರದು. ಶಿವತತ್ವವು ಮಂಗಳಕರ ಚಿಂತನೆ. ವಿಷವನ್ನು ನುಂಗಿ, ಕೇಳಿದ್ದಕ್ಕೆ ಅಸ್ತು ಎನ್ನುವವ ಶಿವ. ಅರ್ಧನಾರೀಶ್ವರ ಕಲ್ಪನೆ ವಿಶ್ವದಲ್ಲಿ ಎಲ್ಲಿಯೂ ಇಲ್ಲ. ಆತನ ದೇವಸ್ಥಾನಗಳಲ್ಲಿಯೂ ನಿರ್ಬಂಧ ವಿಧಿಸುವುದು ವಿಷಾದನೀಯ’ ಎಂದರು.
ತಮ್ಮ ವಿವಾಹದ ಬಗ್ಗೆ ಪ್ರಸ್ತಾಪಿಸಿದ ಅವರು, ‘ನನ್ನ ಮದುವೆ ಅತ್ಯಂತ ಸರಳವಾಗಿ ನಡೆಯಿತು. ದಲಿತ ವ್ಯಕ್ತಿಯೇ ನಮಗೆ ಪ್ರಮಾಣ ವಚನ ಬೋಧಿಸಿದರು. ಅದ್ಧೂರಿ ವಿವಾಹವಾಗಿ ಸಾಲ ಮಾಡಿಕೊಳ್ಳಬಾರದು. ಅದೇ ಹಣವನ್ನು ಶಿಕ್ಷಣ, ಆರೋಗ್ಯಕ್ಕೆ ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಇದಕ್ಕೂ ಮೊದಲು ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಗಾಯಿತ್ರಿ ಕೆ.ಎಂ., ಸ್ನಾತಕೋತ್ತರ ಪದವಿಯಲ್ಲಿ ಕಾಳೇಗೌಡ ನಾಗವಾರ ಅವರು ತಮಗೆ ಪ್ರಾಧ್ಯಾಪಕರಾಗಿದ್ದರು ಎಂದು ಸ್ಮರಿಸಿಕೊಂಡರು.
‘ಡಿಕೆಶಿ ಜಾರ್ಜ್ ಮುನಿಸು’:
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಬಗ್ಗೆ ಪ್ರಸ್ತಾಪಿಸಿದ ಕಾಳೇಗೌಡ ನಾಗವಾರ ‘ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಉಮಾಶ್ರೀ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾಗ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ನಾನು ಕೂಡ ಇದ್ದೆ. ಹಿರಿತನ ಮತ್ತು ಅರ್ಹತೆ ಪರಿಗಣಿಸಿ ಸಾಧಕರನ್ನು ಆಯ್ಕೆ ಮಾಡುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಆ ವೇಳೆ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಮತ್ತು ಕೆ.ಜೆ. ಜಾರ್ಜ್ ಅವರು ತಾವು ಶಿಫಾರಸು ಮಾಡಿದ್ದ ಹೆಸರನ್ನು ಸಮಿತಿ ಪರಿಗಣಿಸಿಲ್ಲವೆಂದು ಮುನಿಸಿಕೊಂಡಿದ್ದರು. ಆಗ ಆಯ್ಕೆಗೆ ಅನುಸರಿಸಲಾದ ಮಾನದಂಡಗಳ ಬಗ್ಗೆ ಅವರಿಗೆ ವಿವರಿಸಲಾಯಿತು’ ಎಂದು ಸ್ಮರಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.