ADVERTISEMENT

ಬೆಂಗಳೂರು | ₹5.15 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: ನೈಜೀರಿಯಾ ಪ್ರಜೆ ಸೆರೆ

ಜೈಲಿನಿಂದ ಬಿಡುಗಡೆ ಬಳಿಕ ಕೃತ್ಯ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 22:30 IST
Last Updated 20 ಜನವರಿ 2026, 22:30 IST
ಅರ್ನೆಸ್ಟ್ ಯುಗಾಹ್ಸ್
ಅರ್ನೆಸ್ಟ್ ಯುಗಾಹ್ಸ್   

ಬೆಂಗಳೂರು: ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಸಿಸಿಬಿ ಕೇಂದ್ರ ಅಪರಾಧ ದಳದ ಆ್ಯಂಟಿ–ನಾರ್ಕೋಟಿಕ್ಸ್‌ ಘಟಕದ ತಂಡವು ಕಾರ್ಯಾಚರಣೆ ನಡೆಸಿ ಬಂಧಿಸಿದೆ.

ಮಾರತ್‌ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮುನೇನಕೊಳಲು ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸವಿದ್ದ ಅರ್ನೆಸ್ಟ್ ಯುಗಾಹ್ಸ್ (45) ಎಂಬಾತನನ್ನು ಬಂಧಿಸಲಾಗಿದೆ. 2.5 ಕೆ.ಜಿ ಎಂಡಿಎಂಎ, 300 ಎಕ್ಸ್‌ಟೆಸಿ ಮಾತ್ರೆಗಳ ಸಹಿತ ಒಟ್ಟು ₹5.15 ಕೋಟಿ ಮೌಲ್ಯದ ಮಾದಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ವಾಸದ ಮನೆಯಲ್ಲೇ ಮಾದಕ ವಸ್ತುಗಳನ್ನು ಸಂಗ್ರಹಿಸಿಕೊಂಡು ವಿದ್ಯಾರ್ಥಿಗಳು, ಖಾಸಗಿ ಕಂಪನಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದುದು ವಿಚಾರಣೆ ವೇಳೆ ಗೊತ್ತಾಗಿದೆ. ಈ ಹಿಂದೆ ಕಾಡುಗೋಡಿ, ಹೆಣ್ಣೂರು ಠಾಣೆಗಳಲ್ಲಿ ಅರ್ನೆಸ್ಟ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಇತ್ತೀಚೆಗೆ ಜೈಲಿನಿಂದ‌ ಬಿಡುಗಡೆಯಾದ ಬಳಿಕ ಮತ್ತೆ ಅಕ್ರಮ ಚಟುವಟಿಕೆ ಮುಂದುವರಿಸಿದ್ದ. ಸಿಸಿಬಿ ಎಎನ್‌ಡಬ್ಲ್ಯು ಅಧಿಕಾರಿಗಳು ಆತನ ಚಲನವಲನದ ಮೇಲೆ ನಿಗಾ ವಹಿಸಿ, ಮತ್ತೆ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದಾಗ ಬಂಧಿಸಿದ್ದಾರೆ ಎಂದು ಹೇಳಿದರು. 

ADVERTISEMENT

ಆರೋಪಿಯು ವೈದ್ಯಕೀಯ ವೀಸಾ ಮೇಲೆ ಭಾರತಕ್ಕೆ ಬಂದಿದ್ದು, ವೀಸಾ ಅವಧಿ ಮುಗಿದು ಐದು ವರ್ಷ ಕಳೆದರೂ ವಾಸವಿದ್ದ. ಮುಂಬೈ, ದೆಹಲಿ ಮೂಲಕ ಬೆಂಗಳೂರಿಗೆ ಬಂದು ಡ್ರಗ್ಸ್‌ ಮಾರಾಟ ದಂದೆಯಲ್ಲಿ ತೊಡಗಿದ್ದ. ಒಂದು ಎಕ್ಸ್‌ಟೆಸಿ ಮಾತ್ರೆ ದರ ₹3 ಸಾವಿರದಿಂದ ₹5 ಸಾವಿರ. ಇದನ್ನು ಮದ್ಯದ ಪಾರ್ಟಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಜೋಧಪುರ ಮತ್ತು ಮುಂಬೈನಿಂದ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡುತ್ತಿದ್ದುದು ಗೊತ್ತಾಗಿದೆ. ಈತನ ಜತೆ ಸಂಪರ್ಕದಲ್ಲಿದ್ದವರು, ಗ್ರಾಹಕರನ್ನು ಪತ್ತೆಹಚ್ಚುವ ಕೆಲಸ ಮುಂದುವರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.