ಬೆಂಗಳೂರು: ಮಾದಕ ವಸ್ತು ಮುಕ್ತ ಕರ್ನಾಟಕ ಗುರಿ ಸಾಧಿಸಲು ಮುಂದಾಗಿರುವ ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿದ್ದ 315 ವಿದೇಶಿ ಪೆಡ್ಲರ್‌ಗಳನ್ನು ಬಂಧಿಸಿದೆ.
ಈ ಪೈಕಿ ಹತ್ತು ಪೆಡ್ಲರ್‌ಗಳು ಹಾಗೂ 35 ವ್ಯಸನಿಗಳನ್ನು ವಲಸಿಗರ ಕೇಂದ್ರಕ್ಕೆ ಕಳುಹಿಸಿ, ಆಯಾ ಪ್ರದೇಶಗಳಿಗೆ ಮಾಹಿತಿ ರವಾನಿಸಿ ಗಡಿಪಾರಿಗೆ ಕ್ರಮ ಕೈಗೊಂಡಿದೆ. ಬಳಿಕ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಕೇಂದ್ರ ಗೃಹ ಸಚಿವಾಲಯದ ಮೂಲಕ ಅವರ ದೇಶಗಳಿಗೆ ಕಳುಹಿಸಲಾಗುತ್ತದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ದಂಧೆಯಲ್ಲಿ ಭಾಗಿಯಾಗಿದ್ದ 200 ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ. ಈ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ.
ಪೊಲೀಸರ ಹದ್ದಿನ ಕಣ್ಣು ತಪ್ಪಿಸಿ ಮಾದಕ ವಸ್ತು ಸಾಗಣೆ ಮತ್ತು ಮಾರಾಟ ನಡೆಯುತ್ತಿದೆ. ಮಾದಕ ವಸ್ತುಗಳ ಪೂರೈಕೆ ಪ್ರಮಾಣ ಹಾಗೂ ವ್ಯಸನಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಡ್ರಗ್ಸ್ ದಂಧೆಯಲ್ಲಿ ಸ್ಥಳೀಯ ಆರೋಪಿಗಳ ಜತೆಗೆ ವಿದೇಶಿ ಪೆಡ್ಲರ್‌ಗಳೂ ಭಾಗಿ ಆಗುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ.
ವಿದ್ಯಾರ್ಥಿ, ವ್ಯಾಪಾರ ಹಾಗೂ ಪ್ರವಾಸಿ ವೀಸಾಗಳಡಿ ನಗರಕ್ಕೆ ಬರುವ ವಿದೇಶಿಯರ ಪೈಕಿ ಕೆಲವರು ಗಡುವು ಮುಗಿದರೂ ತಮ್ಮ ದೇಶಕ್ಕೆ ತೆರಳದೆ ಇಲ್ಲೇ ನೆಲೆಯೂರಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗುತ್ತಿದ್ದಾರೆ. ಬಂಧಿತರ ಪೈಕಿ ಬಹುತೇಕರು ನೈಜೀರಿಯಾ ಮೂಲದವರು ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ವಿದ್ಯಾಭ್ಯಾಸ ಹಾಗೂ ಐಟಿ–ಬಿಟಿ ಉದ್ಯೋಗ ಅರಸಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿ ವರ್ಷ ಹೊರರಾಜ್ಯದಿಂದ ಬೆಂಗಳೂರಿಗೆ ಯುವಕರು ಬರುತ್ತಾರೆ. ಹಾಸ್ಟೆಲ್, ಪಿ.ಜಿ, ಸ್ವಯಂ ಉದ್ಯೋಗ ಮಾಡಿಕೊಂಡು ವಾಸವಾಗಿರುವವರನ್ನು ಗುರಿಯಾಗಿಸಿಕೊಂಡು ಕೋಟ್ಯಂತರ ರೂಪಾಯಿ ಗಾಂಜಾ ಮಾರಾಟ ನಡೆಸಲಾಗುತ್ತಿದೆ.
ಮಾದಕ ವಸ್ತುಗಳನ್ನು ಸಾಗಿಸಲು ನೋಂದಣಿ ಸಂಖ್ಯೆಯಿಲ್ಲದ ಹಾಗೂ ನಕಲಿ ನಂಬರ್ ಪ್ಲೇಟ್ ಹೊಂದಿರುವ ದ್ವಿಚಕ್ರ ವಾಹನಗಳನ್ನು ಪೆಡ್ಲರ್‌ಗಳು ಬಳಕೆ ಮಾಡುತ್ತಿದ್ದಾರೆ.
‘ವಿವಿಧ ಮಾದರಿಯ ವೀಸಾದಡಿ ಬಂದು ಸಿಂಥೆಟಿಕ್ ಡ್ರಗ್ಸ್ ಜಾಲದಲ್ಲಿ ತೊಡಗಿಸಿಕೊಳ್ಳುತ್ತಾರೆ. ಡಾರ್ಕ್ ನೆಟ್ ವೆಬ್‌ಸೈಟ್, ಅಂಚೆ ಪಾರ್ಸೆಲ್, ದೆಹಲಿ ಹಾಗೂ ಮುಂಬೈ ಮೂಲಗಳಿಂದ ಚಾಕೊಲೇಟ್, ಸೋಪು ಹಾಗೂ ಇನ್ನಿತರ ಪಾರ್ಸೆಲ್ಗಳಲ್ಲಿ ಡ್ರಗ್ಸ್ ತರಿಸಿಕೊಂಡು ಟೆಕಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ, ಬಂದ ಹಣದಲ್ಲಿ ವಿಲಾಸಿ ಜೀವನ ನಡೆಸುತ್ತಾರೆ. ಜೈಲಿಗೆ ಹೋಗಿ ಜಾಮೀನು ಪಡೆದು ಮತ್ತೆ ಅದೇ ಕೃತ್ಯದಲ್ಲಿ ಹಲವರು ಭಾಗಿಯಾಗುತ್ತಿದ್ದಾರೆ. ಬಟ್ಟೆ ವ್ಯಾಪಾರ, ಪ್ರಾವಿಷನ್ ಸ್ಟೋರ್ಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ವ್ಯವಸ್ಥಿತ ಜಾಲದ ಮೂಲಕ ದಂಧೆಯಲ್ಲಿ ನಿರತರಾಗುತ್ತಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಮಾದಕ ವಸ್ತು ಮಾರಾಟ ಹಾಗೂ ಸರಬರಾಜು ಕಾಯ್ದೆ(ಎನ್‌ಡಿಪಿಎಸ್) ಕಲಂ 27ರ ಅನ್ವಯ ಮಾದಕ ವಸ್ತು ಸೇವನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳ ಶಾಲಾ–ಕಾಲೇಜುಗಳ ವ್ಯಾಪ್ತಿ ಪ್ರದೇಶಗಳು, ಪೇಯಿಂಗ್ ಗೆಸ್ಟ್ ಕಟ್ಟಡಗಳು, ಪಬ್ ಹಾಗೂ ರೆಸ್ಟೊರೆಂಟ್‌ಗಳ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಅನುಮಾನಸ್ಪದವಾಗಿ ತಿರುಗಾಡುವ ಹಾಗೂ ಅಮಲಿನಲ್ಲಿರುವ ವ್ಯಕ್ತಿಗಳನ್ನು ಗುರುತಿಸಿ, ಡ್ರಗ್ಸ್ ಸೇವನೆ ಪರೀಕ್ಷೆ ನಡೆಸಲಿದ್ದಾರೆ. ಒಂದು ವೇಳೆ ಡ್ರಗ್ಸ್ ಸೇವನೆ ದೃಢಪಟ್ಟರೆ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಿದ್ದಾರೆ’ ಎಂದು ಹೇಳಿದರು.
ಎನ್‌ಡಿಪಿಎಸ್ ಕಾಯ್ದೆ ಕಲಂ 27ರ ಅನ್ವಯ ಯಾವುದೇ ವ್ಯಕ್ತಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟರೆ ನ್ಯಾಯಲಯವು ಆರು ತಿಂಗಳಿನಿಂದ ಒಂದು ವರ್ಷ ಜೈಲು ಹಾಗೂ ದಂಡ ವಿಧಿಸುವ ಅವಕಾಶವಿದೆ. ಆದರೆ, ಎನ್‌ಡಿಪಿಎಸ್ ಕಾಯ್ದೆ ಕಲಂ 64ಎ ಅನ್ವಯ ಮಾದಕ ವಸ್ತು ವ್ಯಸನಕ್ಕೆ ಗುರಿಯಾಗಿರುವ ಆರೋಪಿಯು ಸ್ವಯಂ ಪ್ರೇರಿತವಾಗಿ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ಪ್ರಾಸಿಕ್ಯೂಷನ್‌ನಿಂದ (ಕೇಸ್ ವಿಚಾರಣೆಯಿಂದ) ವಿನಾಯಿತಿ ಇದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ 23,869 (2021ರಿಂದ 2025 ಫೆಬ್ರುವರಿ ಅಂತ್ಯಕ್ಕೆ) ಕೇಸ್‌ಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
2024ರಲ್ಲಿ 4188 ಪ್ರಕರಣ ದಾಖಲಿಸಿ 2243 ಪೆಡ್ಲರ್‌ಗಳನ್ನು ಬಂಧಿಸಿ ₹165 ಕೋಟಿ ಮೌಲ್ಯದ 5743 ಕೆ.ಜಿ ಗಾಂಜಾ, 289 ಕೆ.ಜಿ. ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಲಾಗಿದೆ. 2025ರ ಜುಲೈ ವರೆಗೆ 3,530 ಎನ್‌ಡಿಪಿಎಸ್ ಕೇಸ್ ದಾಖಲಿಸಿ, 980 ಪೆಡ್ಲರ್‌ಗಳನ್ನು ಬಂಧಿಸಿ, ₹135 ಕೋಟಿ ಮೌಲ್ಯದ 2,582 ಕೆ.ಜಿ ಗಾಂಜಾ, 330 ಕೆಜಿ ಸಿಂಥೆಟಿಕ್ಸ್ ಡ್ರಗ್ಸ್ ಜಪ್ತಿ ಮಾಡಲಾಗಿದೆ.
ಡ್ರಗ್ಸ್ ದಂಧೆ ಮೇಲೆ ನಿಗಾ ವಹಿಸಲು ಮತ್ತು ಕಾರ್ಯಾಚರಣೆ ನಡೆಸಲು ಸಿಐಡಿಯಲ್ಲಿ ಮಾದಕ ವಸ್ತು ಮತ್ತು ಸಂಘಟಿತ ಅಪರಾಧ ವಿಭಾಗ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಜತೆಗೆ ಕಮಿಷನರೇಟ್‌ನಲ್ಲಿ ಇರುವ ಸಿಸಿಬಿ ವಿಭಾಗ ಮತ್ತು ಠಾಣಾ ಮಟ್ಟದಲ್ಲಿ ಮಾದಕ ದ್ರವ್ಯ ದಂಧೆ ಮೇಲೆ ನಿಗಾವಹಿಸಲಿವೆ. ಡಾರ್ಕ್ ವೆಬ್‌ಸೈಟ್ ಹಾಗೂ ಕೊರಿಯರ್‌ನಲ್ಲಿ ಡ್ರಗ್ಸ್ ದಂಧೆ ಅಂತಹ ಸಾಕಷ್ಟು ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿ, ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ.
ಡ್ರಗ್ಸ್ ದಂಧೆ ನಿಗ್ರಹಕ್ಕೆ ಕಾರ್ಯಪಡೆ
ರಾಜ್ಯದಲ್ಲಿ ಮಾದಕ ವಸ್ತುಗಳ ಪೂರೈಕೆ ಹಾಗೂ ಮಾರಾಟ ದಂಧೆಯ ನಿಗ್ರಹಕ್ಕೆ ಸರ್ಕಾರ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆ (ಎಎನ್‌ಟಿಎಫ್) ರಚಿಸಿದೆ. ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ದರ್ಜೆಯ ಅಧಿಕಾರಿಯು ಎಎನ್‌ಟಿಎಫ್‌ನ ಮುಖ್ಯಸ್ಥರಾಗಿದ್ದು ಅವರ ಅಧೀನದಲ್ಲಿ ಘಟಕದ ಸಿಬ್ಬಂದಿಯು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕಾರ್ಯಪಡೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಸಹಾಯಕ ಪೊಲೀಸ್ ಆಯುಕ್ತರು (ಎಸಿಪಿ) ಪೊಲೀಸ್ ಇನ್‌ಸ್ಪೆಕ್ಟರ್ ಸಬ್ ಇನ್‌ಸ್ಪೆಕ್ಟರ್ ಹೆಡ್ ಕಾನ್‌ಸ್ಟೆಬಲ್ ಹಾಗೂ ಪೊಲೀಸ್ ಕಾನ್‌ಸ್ಟೆಬಲ್‌ಗಳು ಇದ್ದಾರೆ. ವಲಯ ಹಂತದಲ್ಲೂ ಎಎನ್‌ಟಿಎಫ್ ಘಟಕಗಳನ್ನು ರಚಿಸಲಾಗಿದೆ. ಡ್ರಗ್ಸ್ ಫ್ರೀ ಕರ್ನಾಟಕ ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದು ಸಹಾಯವಾಣಿ 1042 ಸ್ಥಾಪಿಸಲಾಗಿದೆ.
ನಗರದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಾರ್ವಜನಿಕರೂ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು.–ಸೀಮಂತ್ ಕುಮಾರ್ ಸಿಂಗ್ ನಗರ ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.