ಬೆಂಗಳೂರು: ‘ಮಾದಕ ವಸ್ತು ಅಂಶವಿರುವ ಮಾತ್ರೆಗಳನ್ನು ಸೇವಿಸಿಯುವಕರಿಬ್ಬರು ಮೃತಪಟ್ಟಿದ್ದಾರೆ’ ಎನ್ನಲಾದ ಪ್ರಕರಣ ಸಂಬಂಧ ಪಶ್ಚಿಮ ಕಾರ್ಡ್ ರಸ್ತೆಯ ಮನ್‌ದೀಪ್ ಫಾರ್ಮ್ ಔಷಧಿ ಮಳಿಗೆ ಮಾಲೀಕ ಮನೀಶ್ ಕುಮಾರ್ (30) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ವೈಯಾಲಿಕಾವಲ್ ಸಮೀಪದ ಕೋದಂಡರಾಮಪುರ ನಿವಾಸಿಗಳಾದ ಅಭಿಲಾಷ್ (23) ಮತ್ತು ಗೋಪಿ (30) ಎಂಬುವರು ಇತ್ತೀಚೆಗೆ ಮೃತಪಟ್ಟಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು, ಮಾದಕ ವಸ್ತು ಅಂಶವಿರುವ ಮಾತ್ರೆಗಳನ್ನು ಸೇವಿಸಿದ್ದೇ ಅವರ ಸಾವಿಗೆ ಕಾರಣವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು.
ಇದೀಗ ಯುವಕರಿಗೆ ಮಾತ್ರೆ ಮಾರಾಟ ಮಾಡಿದ್ದ ಔಷಧಿ ಮಳಿಗೆ ಮಾಲೀಕನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಅದರ ಜೊತೆಗೆ ಔಷಧ ನಿಯಂತ್ರಣ ಅಧಿಕಾರಿಗಳು, ಔಷಧಿ ಮಳಿಗೆ ಮೇಲೆ ದಾಳಿ ಮಾಡಿದ್ದಾರೆ. ಹಲವು ಬಗೆಯ ಔಷಧಿಗಳನ್ನು ಜಪ್ತಿ ಮಾಡಿ ಮಳಿಗೆಗೆ ಬೀಗ ಹಾಕಿದ್ದಾರೆ.
‘ಮೃತ ಯುವಕರು ಮನ್‌ದೀಪ್ ಫಾರ್ಮ್ ಔಷಧಿ ಮಳಿಗೆಯಲ್ಲಿ ಮಾತ್ರೆಗಳನ್ನು ಖರೀದಿ ಮಾಡಿದ್ದರು. ಮಳಿಗೆಯ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ವೈದ್ಯರ ಸಲಹೆ ಇಲ್ಲದೇ ಮಾತ್ರೆಗಳನ್ನು ಯುವಕರಿಗೆ ಮಾರಾಟ ಮಾಡಿರುವುದನ್ನು ಮಾಲೀಕ ಒಪ್ಪಿಕೊಂಡರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಕೆಲ ನಿಷೇಧಿತ ಮಾತ್ರೆಗಳನ್ನು ಮಳಿಗೆಯಲ್ಲಿ ಸಂಗ್ರಹಿಸಲಾಗಿದೆ. ಆ ಬಗ್ಗೆ ಔಷಧ ನಿಯಂತ್ರಕರು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ. ಮಳಿಗೆಯ ಪರವಾನಗಿ ರದ್ದು ಮಾಡಲು ಅವರೇ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.