ADVERTISEMENT

₹ 73 ಲಕ್ಷ ಮೌಲ್ಯದ ಚರಸ್, ಗಾಂಜಾ ಜಪ್ತಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 21:07 IST
Last Updated 29 ಡಿಸೆಂಬರ್ 2020, 21:07 IST

ಬೆಂಗಳೂರು: ಡ್ರಗ್ಸ್ ಸಾಗಣೆ– ಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿರುವ ಸುದ್ದಗುಂಟೆಪಾಳ್ಯ ಪೊಲೀಸರು, ₹ 73 ಲಕ್ಷ ಮೌಲ್ಯದ ಚರಸ್ ಹಾಗೂ ಗಾಂಜಾ ಜಪ್ತಿ ಮಾಡಿದ್ದಾರೆ.

‘ಎರಡು ಪ್ರತ್ಯೇಕ ಕಾರ್ಯಾಚರಣೆ ನಡೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಪುಣಚದ ಕೆ.ಪ್ರೀತಿಪಾಲ್ ಅಲಿಯಾಸ್ ಪೃಥ್ವಿ ಅಲಿಯಾಸ್ ಗೌತಮ್‌ ಶೆಟ್ಟಿ (48), ಕೆ. ಖಲಂದರ್ (31), ಉತ್ತರ ಪ್ರದೇಶದ ಅಮಿತ್‌ಕುಮಾರ್ (31) ಹಾಗೂ ಸೂರಜ್ (32) ಎಂಬುವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಪ್ರೀತಿಪಾಲ್ ಹಾಗೂ ಖಲಂದರ್‌ ಸೇರಿಕೊಂಡು ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದರು. ಬಿ.ಜಿ.ರಸ್ತೆಯಲ್ಲಿರುವ ಮುನಿಚಿನ್ನಪ್ಪ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಕಾರು ನಿಲ್ಲಿಸಿಕೊಂಡು ಆರೋಪಿಗಳು ಡ್ರಗ್ಸ್ ಮಾರುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಯಿತು. ಅವರಿಂದ ₹ 65 ಲಕ್ಷ ಮೌಲ್ಯದ 214 ಕೆ.ಜಿ 500 ಗ್ರಾಂ ಗಾಂಜಾ ಜಪ್ತಿ ಮಾಡಲಾಯಿತು’ ಎಂದೂ ತಿಳಿಸಿದರು.

ADVERTISEMENT

‘ಆಂಧ್ರಪ್ರದೇಶದ ರಾಜಮಂಡ್ರಿಯಿಂದ ನಗರಕ್ಕೆ ಗಾಂಜಾ ತರುತ್ತಿದ್ದ ಆರೋಪಿಗಳು, ಕೆಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಮಾರುತ್ತಿದ್ದರು. ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಪ್ರೀತಿಪಾಲ್ ವಿರುದ್ಧ ಮಂಗಳೂರು, ಉಡುಪಿ ಸೇರಿದಂತೆ ಹಲವೆಡೆ ಪ್ರಕರಣಗಳು ದಾಖಲಾಗಿದ್ದವು. ಜೈಲಿಗೂ ಹೋಗಿದ್ದ ಆತ, ಜಾಮೀನು ಮೇಲೆ ಹೊರಬಂದು ಪುನಃ ಕೃತ್ಯ ಎಸಗಲಾರಂಭಿಸಿದ್ದ’ ಎಂದೂ ಪೊಲೀಸರು ಹೇಳಿದರು.

‘ಇನ್ನೊಂದು ಪ್ರಕರಣದಲ್ಲಿ ಉತ್ತರ ಪ್ರದೇಶದ ಅಮಿತ್‌ಕುಮಾರ್ ಹಾಗೂ ಸೂರಜ್, ಇಂದಿರಾನಗರದಲ್ಲಿ ವಾಸವಿದ್ದರು. ಹಿಮಾಚಲ ಪ್ರದೇಶದಿಂದ ಚರಸ್‌ ತಂದು ನಗರದಲ್ಲಿ ಮಾರುತ್ತಿದ್ದರು. ಹೊಸೂರು ರಸ್ತೆಯ ಕಾಲೇಜೊಂದರ ಬಳಿ ಚರಸ್ ಮಾರಾಟ ಮಾಡುತ್ತಿರುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದರು. ₹ 8 ಲಕ್ಷ ಮೌಲ್ಯದ 600 ಗ್ರಾಂ ಚರಸ್ ಜಪ್ತಿ ಮಾಡಲಾಗಿದೆ’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.