ADVERTISEMENT

ಡಿಎಸ್‌ಎಸ್‌ ಪರ್ಯಾಯ ರಾಜಕೀಯ ಶಕ್ತಿಯಾಗಬೇಕು: ಎನ್‌. ವೆಂಕಟೇಶ್‌

‘ದಲಿತ ಸಾಹಿತ್ಯ ಮತ್ತು ಚಳವಳಿ–50’ರ ಗೋಷ್ಠಿ ಸಮಾರೋಪ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 16:07 IST
Last Updated 4 ಜನವರಿ 2026, 16:07 IST
ದಲಿತ ಸಾಹಿತ್ಯ ಮತ್ತು ಚಳವಳಿ-50 ರಾಜ್ಯಮಟ್ಟದ ಅಧ್ಯಯನ ಶಿಬಿರದ ಸಮಾರೋಪದಲ್ಲಿ ದು.ಸರಸ್ವತಿ, ಡಿ. ಡೊಮಿನಿಕ್, ಮಾವಳ್ಳಿ ಶಂಕರ್, ಎಲ್.ಎನ್. ಮುಕುಂದರಾಜ್, ಎನ್. ವೆಂಕಟೇಶ್, ಕೋಟಿಗಾನಹಳ್ಳಿ ರಾಮಯ್ಯ ಉಪಸ್ಥಿತರಿದ್ದರು.
 ಪ್ರಜಾವಾಣಿ ಚಿತ್ರ
ದಲಿತ ಸಾಹಿತ್ಯ ಮತ್ತು ಚಳವಳಿ-50 ರಾಜ್ಯಮಟ್ಟದ ಅಧ್ಯಯನ ಶಿಬಿರದ ಸಮಾರೋಪದಲ್ಲಿ ದು.ಸರಸ್ವತಿ, ಡಿ. ಡೊಮಿನಿಕ್, ಮಾವಳ್ಳಿ ಶಂಕರ್, ಎಲ್.ಎನ್. ಮುಕುಂದರಾಜ್, ಎನ್. ವೆಂಕಟೇಶ್, ಕೋಟಿಗಾನಹಳ್ಳಿ ರಾಮಯ್ಯ ಉಪಸ್ಥಿತರಿದ್ದರು.  ಪ್ರಜಾವಾಣಿ ಚಿತ್ರ    

ಬೆಂಗಳೂರು: ದಲಿತ ಸಂಘರ್ಷ ಸಮಿತಿಯ ಒತ್ತಡ ಮತ್ತು ಸಹಕಾರದಿಂದಾಗಿ ಕಾಂಗ್ರೆಸ್‌ ಸ್ವಲ್ಪಮಟ್ಟಿಗೆ ಸ್ಪಂದಿಸುತ್ತಿದೆ. ಆದರೆ, ಡಿಎಸ್‌ಎಸ್‌ ಪರ್ಯಾಯ ರಾಜಕೀಯ ಶಕ್ತಿಯನ್ನು ಕಟ್ಟಬೇಕಾದ ಅನಿವಾರ್ಯ ಸಂದರ್ಭ ಸೃಷ್ಟಿಯಾಗಿದೆ ಎಂದು ಡಿಎಸ್‌ಎಸ್‌ ನಾಯಕ ಎನ್‌. ವೆಂಕಟೇಶ್‌ ತಿಳಿಸಿದರು.

ದಲಿತ ಸಾಹಿತ್ಯ ಮತ್ತು ಚಳವಳಿ–50 ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

ಪರ್ಯಾಯ ರಾಜಕೀಯ ಶಕ್ತಿಯಾಗಬೇಕಿದ್ದರೆ ಯುವಜನರು ಈ ಚಳವಳಿಯನ್ನು ಮುನ್ನಡೆಸಬೇಕು. ತನ್ನದೇ ಆದ ಪ್ರಣಾಳಿಕೆ ಇಲ್ಲದೇ ಇರುವುದರಿಂದ ಡಿಎಸ್‌ಎಸ್‌ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗಿಲ್ಲ. ಪ್ರಣಾಳಿಕೆ ತಯಾರಿಸಬೇಕಾಗಿದೆ’ ಎಂದು ಹೇಳಿದರು.

ADVERTISEMENT

‘ದಲಿತ ಚಳವಳಿ, ನಾನು ಮತ್ತು ಮುಂದಿನ ಹಾದಿ’ ಗೋಷ್ಠಿಯಲ್ಲಿ ಪತ್ರಕರ್ತ ಶಿವಾಜಿ ಗಣೇಶನ್‌ ಮಾತನಾಡಿ, ‘ನಾಲ್ಕು ಶಾಸಕರನ್ನು ಒಗ್ಗೂಡಿಸಲು ಆಗದೇ, ನಾಲ್ಕು ಜನರಿಗೆ ಟಿಕೆಟ್‌ ಕೊಡಿಸುವ ಸಾಮರ್ಥ್ಯ ಇಲ್ಲದೇ ಕೇವಲ ಹೈಕಮಾಂಡ್‌ ಕಡೆಗೆ ಮುಖ ಮಾಡಿ ನಿಂತರೆ ಮುಖ್ಯಮಂತ್ರಿ ಸ್ಥಾನ ದಲಿತರಿಗೆ ಸಿಗದು. ಜನಶಕ್ತಿ ಇದ್ದರಷ್ಟೇ ಈ ಸ್ಥಾನ ದಕ್ಕಿಸಿಕೊಳ್ಳಲು ಸಾಧ್ಯ’ ಎಂದು  ತಿಳಿಸಿದರು.

‘ಬೂಸಾ ಪ್ರಕರಣದ ನಂತರ ಬಸವಲಿಂಗಪ್ಪ ಸಚಿವ ಸ್ಥಾನ ಕಳೆದುಕೊಂಡರು. ಆಗ ಅವರನ್ನು ಚಳವಳಿ ಮುನ್ನಡೆಸಲು ಆಹ್ವಾನಿಸಲಾಗಿತ್ತು. ಜನಶಕ್ತಿ ಇದ್ದ ಬಸವಲಿಂಗಪ್ಪ ಅಂದು ದಲಿತ ಚಳವಳಿಗೆ ಬಂದಿದ್ದರೆ ಕರ್ನಾಟಕದ ಕಾನ್ಶಿರಾಂ ಆಗುತ್ತಿದ್ದರು’ ಎಂದು ಹೇಳಿದರು.

ಡಿಎಸ್‌ಎಸ್ ಮುಖಂಡ ಕುಂದೂರು ತಿಮ್ಮಯ್ಯ ಮಾತನಾಡಿ, ‘ಕಿಟ್ಟಿ ಸಹಿತ ಶ್ರೀರಾಮಪುರದ ರೌಡಿಗಳ ಕಾಲಾಳಾಗಿದ್ದ ನಾನು ಕ್ರೌರ್ಯದ ಜಗತ್ತಿನಿಂದ ಹೊರಬಂದು ಜೀವಂತವಾಗಿ ಉಳಿಯಲು ದಲಿತ ಸಂಘರ್ಷ ಸಮಿತಿ ಮತ್ತು ಅಂಬೇಡ್ಕರ್‌ ಕಾರಣ’ ಎಂದು ನೆನಪು ಮಾಡಿಕೊಂಡರು.

ಡಿಎಸ್‌ಎಸ್‌ ಮುಖಂಡ ಆರ್‌. ಮೋಹನ್‌ರಾಜ್‌, ‘ಡಿಎಸ್‌ಎಸ್‌ ನಮಗೆ ಸ್ವಾಭಿಮಾನ, ಧೈರ್ಯ, ಪ್ರಶ್ನೆ ಮಾಡುವ ಮನೋಭಾವ, ನಾವೂ ಮನುಷ್ಯರು ಎಂಬ ಪ್ರಜ್ಞೆಯನ್ನು ಮೂಡಿಸಿತು. ನಮ್ಮ ಮಾನ, ಪ್ರಾಣ ಕಾಪಾಡಿದ ತಾಯಿ. ನಮ್ಮ ಚಳವಳಿಯು ಪರ್ಯಾಯ ಶಕ್ತಿ ಆಗಬೇಕು. ಇಲ್ಲದೇ ಇದ್ದರೆ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳು ನಮ್ಮ ಪರಿಸ್ಥಿತಿ ಬದಲಾಗಲು ಬಿಡುವುದಿಲ್ಲ’ ಎಂದರು.

‘ಡಿಎಸ್‌ಎಸ್‌ ನಮ್ಮ ಬದುಕನ್ನು ಮುನ್ನಡೆಸಿದೆ. ನಾವು ಡಿಎಸ್‌ಎಸ್ ಚಳವಳಿಯನ್ನು ಮುನ್ನಡೆಸಬೇಕಿದೆ’ ಎಂದು ಡಿಎಸ್‌ಎಸ್‌ ಮುಖಂಡ ವಿ. ನಾಗರಾಜ್‌ ಆಶಿಸಿದರು.

ಸಮಾರೋಪದಲ್ಲಿ ಶಿಬಿರದ ನಿರ್ದೇಶಕ ಕೋಟಿಗಾನಹಳ್ಳಿ ರಾಮಯ್ಯ, ಸಹ ನಿರ್ದೇಶಕರಾದ ಸುಬ್ಬು ಹೊಲೆಯಾರ್, ದು.ಸರಸ್ವತಿ, ಸಂಚಾಲಕ ರವಿಕುಮಾರ್ ಬಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಸದಸ್ಯೆ ಪಿ. ಚಂದ್ರಿಕಾ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಿ. ಡೊಮಿನಿಕ್‌ ಉಪಸ್ಥಿತರಿದ್ದರು.

ಡಿಎಸ್‌ಎಸ್‌ನ ಟಿಸಿಲು ಬಿವಿಎಸ್‌: ಮಾವಳ್ಳಿ

ದಲಿತ ಸಂಘರ್ಷ ಸಮಿತಿಯ ಕಾಲ ಮುಗಿದು ಹೋಗಿಲ್ಲ. ಅದರ ಟಿಸಿಲು ಆಗಿ ಬಿವಿಎಸ್‌ ಹುಟ್ಟಿಕೊಂಡಿತ್ತು. ಆದರೆ ಡಿಎಸ್‌ಎಸ್‌ ಮತ್ತು ಬಿವಿಎಸ್‌ ಪರಸ್ಪರ ಅರ್ಥ ಮಾಡಿಕೊಂಡು ಮುಂದಕ್ಕೆ ಹೋಗಿದ್ದರೆ ಒಳ್ಳೆಯದಿತ್ತು ಎಂದು ಮಾವಳ್ಳಿ ಶಂಕರ್ ಹೇಳಿದರು. ಡಿಎಸ್‌ಎಸ್‌ನವರಿಗೆ ಅಂಬೇಡ್ಕರ್‌ ಬಗ್ಗೆ ಗೊತ್ತಿಲ್ಲ. ಅಲ್ಲಿ ಮಾರ್ಕ್ಸ್‌ ಗಾಂಧಿ ಲೋಹಿಯಾ ಇದ್ದಾರೆ ಎಂದೆಲ್ಲ ಹೇಳಿದ್ದಲ್ಲದೇ ನಿಂದನಾತ್ಮಕವಾಗಿ ಟೀಕಿಸಿದರು. ಮಾರ್ಕ್ಸ್‌ ಗಾಂಧಿ ಲೋಹಿಯಾ ಇದ್ದರೆ ತಪ್ಪೇನು. ಒಳ್ಳೆಯದು ಯಾವುದು ಇದ್ದರೂ ಬರಲಿ ಎಂಬ ವಿಶಾಲ ಮನೋಭಾವ ಇರಬೇಕಿತ್ತು. ಬದಲಾಗಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷ ಬಿತ್ತುವ ಕೆಲಸ ಮಾಡಿದ್ದರಿಂದ ಹಿನ್ನಡೆಯಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಆರ್‌ಎಸ್‌ಎಸ್‌ ಎಂಬ ಘಟಸರ್ಪ ನಮ್ಮ ಮುಂದೆ ಬಂದು ನಿಂತಿದೆ. ಧರ್ಮಾಧಾರಿತವಾದ ಪ್ರಭುತ್ವ ನಡೆಯುತ್ತಿದೆ. ಪ್ರಾದೇಶಿಕವಾಗಿ ಕೋಮುವಾದಿ ನೀತಿಯೊಂದಿಗೆ ಜಾಗತೀಕರಣ ಕೆಲಸ ಮಾಡುತ್ತಿದೆ. ಇದನ್ನು ಎದುರಿಸುವ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.