ADVERTISEMENT

ಬೈಕ್‌ ಕಳ್ಳತನದ ಬಗ್ಗೆ ಆನ್‌ಲೈನ್ ದೂರು: ಆರೋಪಿ ಸೆರೆ, 13 ವಾಹನ ಜಪ್ತಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 19:57 IST
Last Updated 3 ಡಿಸೆಂಬರ್ 2022, 19:57 IST
   

ಬೆಂಗಳೂರು: ದ್ವಿಚಕ್ರ ವಾಹನ ಕಳ್ಳತನ ಸಂಬಂಧ ಆನ್‌ಲೈನ್ ಮೂಲಕ ಸಲ್ಲಿಕೆಯಾಗಿದ್ದ ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಕೆಂಗೇರಿ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ 13 ವಾಹನ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

‘ಭೈರವನಗರದ 2ನೇ ಅಡ್ಡರಸ್ತೆಯ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿದ್ದ ಬಗ್ಗೆ ಯುವತಿಯೊಬ್ಬರು, ಪೊಲೀಸ್ ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿ ದೂರು ದಾಖಲಿಸಿದ್ದರು. ಇ–ಎಫ್‌ಐಆರ್ ದಾಖಲಿಸಿಕೊಂಡು, ಆರೋಪಿ ಇಮ್ರಾನ್ ಖಾನ್ (32) ಎಂಬಾತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೆಂಗೇರಿ ಕೊಮ್ಮಘಟ್ಟ ರಸ್ತೆಯ ಬೀಡಿ ಕಾರ್ಮಿಕರ ಕಾಲೊನಿ ನಿವಾಸಿ ಇಮ್ರಾನ್, ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ. ಈತನಿಂದ ₹ 8.30 ಲಕ್ಷ ಮೌಲ್ಯದ 11 ದ್ವಿಚಕ್ರ ವಾಹನ ಹಾಗೂ 2 ಆಟೊ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ನಗರದಲ್ಲಿ ಸುತ್ತಾಡುತ್ತಿದ್ದ ಆರೋಪಿ, ಮನೆಗಳ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ವಾಹನಗಳನ್ನು ಗುರುತಿಸುತ್ತಿದ್ದ. ಹ್ಯಾಂಡಲ್‌ ಲಾಕ್ ಮುರಿದು ವಾಹನಗಳನ್ನು ಕದ್ದೊಯ್ಯುತ್ತಿದ್ದ. ಕೆಲ ದಿನ ನಿರ್ಜನ ಸ್ಥಳಗಳಲ್ಲಿ ವಾಹನಗಳನ್ನು ಇರಿಸುತ್ತಿದ್ದ. ನೋಂದಣಿ ಸಂಖ್ಯೆ ಫಲಕ ಬದಲಿಸಿ ಕೆಲ ವಾಹನ ಮಾರಿದ್ದ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.