
ಬೆಂಗಳೂರು: ‘ಅಶ್ವಮೇಧ ಯಾಗದಲ್ಲಿ ಕುದುರೆ ಬಿಟ್ಟಂತೆ ವಿರೋಧ ಪಕ್ಷದವರನ್ನು ಹಣಿಯಲು ಇ.ಡಿ (ಜಾರಿ ನಿರ್ದೇಶನಾಲಯ) ಎಂಬ ಕುದುರೆ ಬಿಡಲಾಗಿದೆ. ಪಂಜಾಬ್, ರಾಜಸ್ಥಾನ, ದೆಹಲಿ, ಬಿಹಾರ, ಮಹಾರಾಷ್ಟ್ರ, ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಇ.ಡಿ ಕಾರ್ಯಾಚರಣೆಗಳು ನಿರಂತರವಾಗಿ ನಡೆದಿರುವುದು ಇದಕ್ಕೆ ಸಾಕ್ಷಿ’ ಎಂದು ಪತ್ರಕರ್ತ ಕೃಷ್ಣಪ್ರಸಾದ್ ಅಭಿಪ್ರಾಯಪಟ್ಟರು.
ನಗರದ ಗಾಂಧಿ ಭವನದಲ್ಲಿ ನಾಗರಿಕರ ವೇದಿಕೆ ವತಿಯಿಂದ ‘ಜಾರಿ ನಿರ್ದೇಶನಾಲಯ (ಇ.ಡಿ), ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ– 2002, ಸಿಬಿಐ, ಸಂವಿಧಾನ ಹಾಗೂ ರಾಜ್ಯಪಾಲರ ಜವಾಬ್ದಾರಿ’ ವಿಷಯದ ಬಗ್ಗೆ ಭಾನುವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಇ.ಡಿ ದಾಳಿಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿವೆ. ಇವನ್ನೆಲ್ಲ ಪ್ರಶ್ನಿಸಬೇಕಾದ ನಾವೆಲ್ಲರೂ ಮೌನವಾಗಿದ್ದೇವೆ‘ ಎಂದು ಅಂಕಿ ಅಂಶಗಳನ್ನು ಉಲ್ಲೇಖಿಸಿ ಹೇಳಿದರು.
ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಮಾತನಾಡಿ, ‘ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ಪ್ರಜಾಪ್ರಭುತ್ವದ ರಾಜನೀತಿ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಸುಳ್ಳು ಮಾಡುತ್ತಿರುವ ಪ್ರಜಾಪ್ರಭುತ್ವದ ಎಲ್ಲ ಅಂಗಗಳ ಪ್ರತಿನಿಧಿಗಳು, ವೈಯಕ್ತಿಕ ಲಾಭಕ್ಕಾಗಿ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.
‘ಪ್ರಾಮಾಣಿಕತೆಗೆ ಗೌರವ ನೀಡುತ್ತಿದ್ದ ಸಮಾಜ ನಮ್ಮದಾಗಿತ್ತು. ಆದರೆ, ಇಂದು ಶ್ರೀಮಂತಿಕೆ ಹಾಗೂ ಅಧಿಕಾರಕ್ಕೆ ಗೌರವ ಸಿಗುತ್ತಿದೆ. ಪ್ರಾಮಾಣಿಕರಿಗೆ ಗೌರವ ಇಲ್ಲದಂತಾಗಿದೆ. ಜೈಲಿಗೆ ಹೋಗಿ ಬಂದವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದಲ್ಲಿರುವ ಎಲ್ಲರೂ ಜನತಾ ಸೇವಕರು. ವೈಯಕ್ತಿಕ ಲಾಭ ಹಾಗೂ ಅಧಿಕಾರಕ್ಕಾಗಿ ಜವಾಬ್ದಾರಿ ಮರೆಯುತ್ತಿದ್ದಾರೆ. ಯಾವುದೇ ನೇಮಕವಿದ್ದರೂ ಅದರಿಂದ ತಮಗೇನು ಲಾಭ ಎಂಬುದನ್ನೇ ಪ್ರತಿನಿಧಿಗಳು ಲೆಕ್ಕ ಹಾಕುತ್ತಿದ್ದಾರೆ’ ಎಂದರು.
ರಾಜ್ಯಸಭೆ ಸದಸ್ಯ ಎಲ್. ಹನುಮಂತಯ್ಯ ಮಾತನಾಡಿ, ‘ಇ.ಡಿ., ಸಿಬಿಐ, ಐ.ಟಿ ಹಾಗೂ ಇತರ ಸ್ವಾಯತ್ತ ಸಂಸ್ಥೆಗಳು ಒಂದೊಂದಾಗಿ ಬೆತ್ತಲಾಗಿ ನಿಲ್ಲುತ್ತಿವೆ. ಅಕ್ರಮ ಹಾಗೂ ಅಪರಾಧಗಳಲ್ಲಿ ಭಾಗಿಯಾಗುತ್ತಿರುವವರಿಗೆ, ಪಕ್ಷದ ಪ್ರಾಥಮಿಕ ಸದಸ್ಯತ್ವ ಸಿಗುತ್ತಿದ್ದಂತೆ ಕ್ಲಿನ್‌ಚಿಟ್ ನೀಡಲಾಗುತ್ತಿದೆ. ಎಲ್ಲ ಸಂಸ್ಥೆಗಳನ್ನು ನಿರ್ನಾಮ ಮಾಡುತ್ತ ದೇಶಪ್ರೇಮದ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸುತ್ತಿರುವುದು ಆತಂಕಕಾರಿ ಅಂಶ’ ಎಂದರು. ಸಂವಾದದಲ್ಲಿ ಬಿ.ಕೆ. ಚಂದ್ರಶೇಖರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.