ADVERTISEMENT

ಎಡಿನ್‌ಬರ್ಗ್ ವಿ.ವಿ: ಕ್ಯಾಂಪಸ್ ತೆರೆಯಲು ಆಹ್ವಾನ

​ಪ್ರಜಾವಾಣಿ ವಾರ್ತೆ
Published 20 ಮೇ 2022, 19:11 IST
Last Updated 20 ಮೇ 2022, 19:11 IST

ಬೆಂಗಳೂರು: ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಎಡಿನ್ ಬರ್ಗ್ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡುವಂತೆ ಉನ್ನತ ಶಿಕ್ಷಣ ಸಚಿವ
ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಶುಕ್ರವಾರ ಆಹ್ವಾನ ನೀಡಿದರು.

ಲಂಡನ್‌ನಲ್ಲಿ ಇದೇ 22ರಂದು ಆರಂಭವಾಗಲಿರುವ ‘ಎಜುಕೇಷನ್ ವರ್ಲ್ಡ್ ಫೋರಂ’ನಲ್ಲಿ ಭಾಗವಹಿಸಲು ತೆರಳಿರುವ ಅವರು, ಸ್ಕಾಟ್ಲೆಂಡ್ ನಲ್ಲಿರುವ ಸುಮಾರು 450 ವರ್ಷಗಳಷ್ಟು ಹಳೆಯದಾದ ಎಡಿನ್ ಬರ್ಗ್‌ ಕ್ಯಾಂಪಸ್ ಗೆ ಭೇಟಿ ನೀಡಿದ್ದರು.

ವಿಶ್ವವಿದ್ಯಾಲಯದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ ಅವರು ಈ ಆಹ್ವಾನ ನೀಡಿದ್ದರು.

ADVERTISEMENT

ಕ್ಯಾಂಪಸ್ ನಲ್ಲಿರುವ ಬಹುಶಿಸ್ತೀಯ ಶೈಕ್ಷಣಿಕ ಪರಿಪೋಷಕ ಕೇಂದ್ರವಾದ ಬೇಯ್ಸ್ ಸೆಂಟರ್ ಗೆ ಭೇಟಿ ಕೊಟ್ಟ ಸಚಿವರು ಅಲ್ಲಿನ ರೋಬೋಟಿಕ್ ಪ್ರಯೋಗಾಲಯ, ಡ್ಯಾಟಾ ಸೈನ್ಸ್ ಕೇಂದ್ರ ಮತ್ತು ಕೃತಕ ಬುದ್ಧಿಮತ್ತೆ ಕೇಂದ್ರಗಳನ್ನು ವೀಕ್ಷಿಸಿದರು.

ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯ್ಕ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಗೋಪಾಲ ಜೋಶಿ, ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿವಿಯ ಕುಲಪತಿ ಡಾ.ಭಾನು ಮೂರ್ತಿ ಸಚಿವರ ಜತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.