ಪೀಣ್ಯ ದಾಸರಹಳ್ಳಿ: 'ಪ್ರತಿಭೆ ಎನ್ನುವುದು ಹುಟ್ಟಿದಾಗ ಬರುವುದಲ್ಲ, ಸಿಕ್ಕ ಅವಕಾಶವನ್ನು ಬಳಸಿಕೊಂಡು ಪ್ರತಿಭಾವಂತರಾಗಿ ಬೆಳೆಯಬೇಕು’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹೆಸರಘಟ್ಟ ಮುಖ್ಯ ರಸ್ತೆಯ ಮೌಂಟ್ ಶೆಫರ್ಡ್ ಶಿಕ್ಷಣ ಸಂಸ್ಥೆಗಳು ಮತ್ತು ಎಂ.ಎಸ್. ವಾಣಿಜ್ಯ ಕಾಲೇಜಿನ 2025- 26ನೇ ಶೈಕ್ಷಣಿಕ ಸಾಲಿನ ಪದವಿ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.
‘ದೇಶದ ಸ್ವಾತಂತ್ರ್ಯ ಚಳವಳಿ ನಮಗೆ ಶಿಕ್ಷಣವನ್ನು ಕೊಟ್ಟಿದೆ. ಅದರಿಂದ ಉತ್ತಮ ಜ್ಞಾನ ಸಂಪಾದನೆ ಅಗತ್ಯವಾಗಿದೆ' ಎಂದರು.
ಮೌಂಟ್ ಶೆಫರ್ಡ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಾಲ್ಟರ್ ಜೈ ಸಿಂಗ್ ಮಾತನಾಡಿ, ‘ನಮ್ಮ ಜ್ಞಾನವೃದ್ಧಿಯ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದೂ ಶಿಕ್ಷಣದ ಮುಖ್ಯ ಗುರಿ. ಹಾಗಾಗಿ ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ಪಡೆದು ಸಮಾಜಕ್ಕೆ ಮಾದರಿಯಾಗಬೇಕು’ ಎಂದರು.
ಕಾಲೇಜಿನ ಪ್ರಾಚಾರ್ಯ ತಮ್ಮಯ್ಯ ಆರ್.ಬಿ. ಮಾತನಾಡಿ, ‘ತಮ್ಮ ಮಕ್ಕಳು ಎಲ್ಲರಿಗಿಂತ ಹೆಚ್ಚು ವಿದ್ಯಾವಂತರಾಗಬೇಕು ಎಂಬುವುದು ಪೋಷಕರ ಅಭಿಲಾಷೆ. ಆದರೆ ಈ ಉತ್ಸಹದಲ್ಲಿ ಮಕ್ಕಳ ಬಗ್ಗೆ ನಿಗಾ ವಹಿಸುವುದು ಕೂಡ ಮುಖ್ಯವಾಗಿದೆ’ ಎಂದು ಹೇಳಿದರು.
ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಮಾತನಾಡಿದರು. ಈ ಸಂದರ್ಭದಲ್ಲಿ ಸಂಶೋಧನಾ ಕೇಂದ್ರ, ಕಂಪ್ಯೂಟರ್ ಲ್ಯಾಬ್ ಮತ್ತು ನವೀಕೃತ ಕ್ಯಾಂಟೀನ್ ಅನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.