ADVERTISEMENT

ಕೆಆರ್‌ ಪುರದಲ್ಲಿ ವೃದ್ಧೆ ಕೈಕಾಲು ಕತ್ತರಿಸಿ ಹತ್ಯೆ: ಪಕ್ಕದ ಮನೆ ನಿವಾಸಿ ಸೆರೆ

* ಚಿನ್ನಾಭರಣ ದೋಚಲು ಕೃತ್ಯ ಎಸಗಿದ್ದ ಆರೋಪಿ * ನಕಲಿ ಚಿನ್ನವೆಂದು ಹೇಳಿದ್ದ ವ್ಯಾಪಾರಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 23:34 IST
Last Updated 26 ಫೆಬ್ರುವರಿ 2024, 23:34 IST
<div class="paragraphs"><p>ದಿನೇಶ್‌, ಸುಶೀಲಮ್ಮ</p></div>

ದಿನೇಶ್‌, ಸುಶೀಲಮ್ಮ

   

ಬೆಂಗಳೂರು: ಕೆ.ಆರ್. ಪುರ ಠಾಣೆ ವ್ಯಾಪ್ತಿಯಲ್ಲಿ ಸುಶೀಲಮ್ಮ (70) ಎಂಬುವವರನ್ನು ಕೊಂದು ಮೃತದೇಹವನ್ನು ತುಂಡರಿಸಿ ಡ್ರಮ್‌ನಲ್ಲಿಟ್ಟು ಪರಾರಿಯಾಗಿದ್ದ ಆರೋಪಿ ದಿನೇಶ್‌ನನ್ನು (40) ಪೊಲೀಸರು ಸೋಮವಾರ ಬಂಧಿಸಿದ್ದಾರೆ.

‘ಬಸವನಪುರ ಮುಖ್ಯರಸ್ತೆಯ ನಿಸರ್ಗ ಲೇಔಟ್‌ನ ದಿನೇಶ್, ಚಿನ್ನಾಭರಣ ದೋಚುವ ಉದ್ದೇಶದಿಂದ ಸುಶೀಲಮ್ಮ ಅವರನ್ನು ಫೆ.24ರಂದು ಹತ್ಯೆ ಮಾಡಿ ಪರಾರಿಯಾಗಿದ್ದ. ಸುಶೀಲಮ್ಮ ಅವರ ತುಂಡರಿಸಿದ ಮೃತದೇಹ ಫೆ.25ರಂದು ಡ್ರಮ್‌ನಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಾದ ಕೆಲ ಗಂಟೆಗಳಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಶಿವಕುಮಾರ್ ಗುಣಾರೆ ತಿಳಿಸಿದರು.

ADVERTISEMENT

‘ಕೋವಿಡ್ ಲಾಕ್‌ಡೌನ್‌ಗೂ ಮುನ್ನ ದಿನೇಶ್, ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೋವಿಡ್ ನಂತರ ಕೆಲಸ ಬಿಟ್ಟಿದ್ದ. ಆಮೇಲೆ ಎಲ್ಲಿಯೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಪತ್ನಿಯೇ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು’ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಪರ ಪ್ರಚಾರ

‘ಚಿಕ್ಕಬಳ್ಳಾಪುರದ ಸುಶೀಲಮ್ಮ ಅವರಿಗೆ ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಸ್ವಂತ ಊರಿನಲ್ಲಿದ್ದ ಆಸ್ತಿ ಮಾರಿ ಬೆಂಗಳೂರಿಗೆ ಬಂದಿದ್ದ ಅವರು, ನಿಸರ್ಗ ಲೇಔಟ್‌ನಲ್ಲಿ ಪುತ್ರಿ ಜೊತೆ ನೆಲೆಸಿದ್ದರು. ಇನ್ನೊಬ್ಬ ಮಗಳು ಹಾಗೂ ಮಗ ಪ್ರತ್ಯೇಕವಾಗಿ ವಾಸವಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬಿಜೆಪಿ ಕಾರ್ಯಕರ್ತನೆಂದು ಹೇಳಿಕೊಳ್ಳುತ್ತಿದ್ದ ದಿನೇಶ್, ಪಕ್ಕದ ಮನೆಯಲ್ಲಿದ್ದ ಸುಶೀಲಮ್ಮ ಅವರನ್ನು ಪರಿಚಯಿಸಿಕೊಂಡಿದ್ದ. ಇಬ್ಬರೂ ಸೇರಿ ಕಳೆದ ಚುನಾವಣೆ ಸಂದರ್ಭದಲ್ಲಿ ಸ್ಥಳೀಯರ ಜೊತೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು. ಮಗಳ ಜೊತೆ ಆಗಾಗ ಜಗಳ ಮಾಡುತ್ತಿದ್ದ ಸುಶೀಲಮ್ಮ, ದಿನೇಶ್ ಮನೆಗೂ ಹೋಗಿ ಬರುತ್ತಿದ್ದರು’ ಎಂದು ಹೇಳಿವೆ.

₹ 20 ಲಕ್ಷ ಸಾಲ, ಆಭರಣ ನೋಡಿ ಸಂಚು

‘ಆಧಾರ್, ಪಡಿತರ ಚೀಟಿ, ವೃದ್ಧಾಪ್ಯ ಹಾಗೂ ವಿಧವಾ ವೇತನ ಮಾಡಿಸಿಕೊಡುವುದಾಗಿ ಆರೋಪಿ ದಿನೇಶ್ ಜನರಿಗೆ ಹೇಳುತ್ತಿದ್ದ. ಐಷಾರಾಮಿ ಜೀವನ ನಡೆಸಬೇಕೆಂದು ಬಯಸುತ್ತಿದ್ದ ಈತ, ₹ 20 ಲಕ್ಷ ಸಾಲ ಮಾಡಿದ್ದ. ನಿಗದಿತ ದಿನದಂದು ಸಾಲ ಮರು ಪಾವತಿ ಮಾಡಿರಲಿಲ್ಲ. ಸಾಲ ಕೊಟ್ಟವರು ಪೀಡಿಸಲಾರಂಭಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸುಶೀಲಮ್ಮ ಹೆಚ್ಚು ಚಿನ್ನಾಭರಣ ಧರಿಸುತ್ತಿದ್ದರು. ಮತ್ತಷ್ಟು ಆಭರಣ ಖರೀದಿಸಬೇಕೆಂದು ದಿನೇಶ್ ಬಳಿ ಹೇಳಿಕೊಂಡಿದ್ದರು. ಸುಶೀಲಮ್ಮ ಅವರನ್ನು ಕೊಂದು ಚಿನ್ನಾಭರಣ ದೋಚಿ, ಅದರ ಮಾರಾಟದಿಂದ ಬಂದ ಹಣದಲ್ಲಿ ಸಾಲ ತೀರಿಸಲು ದಿನೇಶ್ ಸಂಚು ರೂಪಿಸಿದ್ದ’ ಎಂದು ಹೇಳಿವೆ.

ದೇವಸ್ಥಾನಕ್ಕೆ ಹೋಗಲೆಂದು ಕರೆಸಿ ಹತ್ಯೆ

‘ಆರೋಪಿ ದಿನೇಶ್‌ನ ಪತ್ನಿ ಹಾಗೂ ಮಕ್ಕಳು ಫೆ.24ರಂದು ಬೇರೆ ಊರಿಗೆ ಹೋಗಿದ್ದರು. ಒಂಟಿಯಾಗಿದ್ದ ದಿನೇಶ್‌, ದೇವಸ್ಥಾನಕ್ಕೆ ಹೋಗಿ ಬರೋಣವೆಂದು ಹೇಳಿ ಸುಶೀಲಮ್ಮ ಅವರನ್ನು ಮನೆಗೆ ಕರೆಸಿದ್ದ. ಸುಶೀಲಮ್ಮ ಅವರು ಸರಗಳು, ಬಳೆ, ಉಂಗುರ, ಕಿವಿಯೋಲೆ ಧರಿಸಿಕೊಂಡು ಮನೆಗೆ ಬಂದಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಕೆಲ ನಿಮಿಷ ಸುಶೀಲಮ್ಮ ಅವರ ಜೊತೆ ಮಾತನಾಡುತ್ತ ಕುಳಿತಿದ್ದ ಆರೋಪಿ, ಏಕಾಏಕಿ ದಾಳಿ ಮಾಡಿ ಉಸಿರುಗಟ್ಟಿಸಿ ಕೊಂದಿದ್ದ. ನಂತರ, ಎಲ್ಲ ಆಭರಣ ಬಿಚ್ಚಿಕೊಂಡು ಮಾರಲು ಆಭರಣ ಮಳಿಗೆಯೊಂದಕ್ಕೆ ಹೋಗಿದ್ದ. ಆಗ ಮನೆಯಲ್ಲಿಯೇ ಮೃತದೇಹವಿತ್ತು’ ಎಂದು ಹೇಳಿವೆ.

ಶ್ವಾನದಳ ಕ್ಯಾಮೆರಾ ಸುಳಿವು

‘ಆರೋಪಿ ಡ್ರಮ್ ಸಾಗಿಸುತ್ತಿದ್ದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಶ್ವಾನದಳದ ಸಿಬ್ಬಂದಿ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು. ಶ್ವಾನವು ಆರೋಪಿ ಮನೆ ಬಾಗಿಲು ಬಳಿ ಹೋಗಿ ನಿಂತಿತ್ತು. ಎರಡೂ ಸುಳಿವು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಿವಿಯೋಲೆಯಷ್ಟೆ ಬಂಗಾರದ್ದಾಗಿತ್ತು

‘ಆರೋಪಿಯು ಮಾರಲು ಹೋದಾಗ ಚಿನ್ನಾಭರಣ ಪರೀಕ್ಷಿಸಿದ್ದ ಮಳಿಗೆ ವ್ಯಾಪಾರಿ ಕಿವಿಯೋಲೆ ಹೊರತುಪಡಿಸಿ ಉಳಿದೆಲ್ಲವೂ ನಕಲಿ ಬಂಗಾರವೆಂದು ಹೇಳಿದ್ದರು. ಕಿವಿಯೋಲೆಯನ್ನು ಮಾತ್ರ ಅಡವಿಟ್ಟಿದ್ದ ಆರೋಪಿ ಅದರಿಂದ ಬಂದ ಹಣದಲ್ಲಿ ಎರಡು ಡ್ರಮ್ ಖರೀದಿಸಿ ಮನೆಗೆ ತಂದಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ಸುಶೀಲಮ್ಮ ಅವರ ದೇಹವನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿದ್ದ ಆರೋಪಿ ಡ್ರಮ್‌ನಲ್ಲಿ ಹಾಕಿದ್ದ. ಜೊತೆಗೆ ನಕಲಿ ಚಿನ್ನಾಭರಣವನ್ನೂ ಅದರಲ್ಲಿ ಎಸೆದಿದ್ದ. ಫೆ. 25ರಂದು ನಸುಕಿನಲ್ಲಿ ಮನೆ ಸಮೀಪದಲ್ಲಿ ಡ್ರಮ್ ಇಟ್ಟು ಪರಾರಿಯಾಗಿದ್ದ’ ಎಂದು ಹೇಳಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.