ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಿದ್ಧತೆಯನ್ನು ಜೆಡಿಎಸ್ ಚುರುಕು
ಗೊಳಿಸಿದೆ. ಅಭ್ಯರ್ಥಿಯ ಆಯ್ಕೆಗಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹಿಸಿದರು.
ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ನಡೆದ ಸಭೆಯಲ್ಲಿ 250ಕ್ಕೂ ಹೆಚ್ಚು ಮುಖಂಡರು ಪಾಲ್ಗೊಂಡಿದ್ದರು. ಕೆಲವ
ರೊಂದಿಗೆ ಕುಮಾರಸ್ವಾಮಿ ಪ್ರತ್ಯೇಕವಾಗಿ ಚರ್ಚೆ ನಡೆಸಿ ಅಭಿಪ್ರಾಯ ಆಲಿಸಿದ್ದಾರೆ. ನಂತರ ಎಲ್ಲರೊಂದಿಗೆ ಸಭೆ ನಡೆಸಿ, ಚುನಾವಣಾ ತಯಾರಿ ಕುರಿತು ಮಾತನಾಡಿದ್ದಾರೆ.
ಬುಧವಾರದ ಸಭೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇ
ಗೌಡ ಅವರಿಗೆ ತಿಳಿಸಿ, ಸಲಹೆ ಆಧರಿಸಿ ಅಭ್ಯರ್ಥಿ ಆಯ್ಕೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸುವ ಗುರಿಯೊಂದಿಗೆ ತಕ್ಷಣದಿಂದಲೇ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗುವಂತೆ ಮುಖಂಡರಿಗೆ ಸೂಚನೆ ನೀಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ರಾಮಚಂದ್ರ, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್. ಪ್ರಕಾಶ್ ಸೇರಿದಂತೆ ಹಲವರ ಹೆಸರುಗಳು ಚರ್ಚೆ ವೇಳೆ ಪ್ರಸ್ತಾಪವಾಗಿವೆ. ದಾಸರಹಳ್ಳಿ ಶಾಸಕ ಆರ್. ಮಂಜುನಾಥ್ ಸೇರಿದಂತೆ ಪ್ರಮುಖ ಮುಖಂಡರು ಸಭೆಯಲ್ಲಿದ್ದರು.
ಎರಡೂ ಕಡೆ ಗೆಲ್ಲುವ ವಿಶ್ವಾಸ: ಉಪ ಚುನಾವಣೆ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ‘ಶಿರಾ ಜೆಡಿಎಸ್ ಶಾಸಕರಿದ್ದ ಕ್ಷೇತ್ರ. ರಾಜರಾಜೇಶ್ವರಿನಗರದಲ್ಲೂ ಪಕ್ಷದ ಪ್ರಾಬಲ್ಯವಿದೆ. ಎರಡೂ ಕಡೆಗಳಲ್ಲಿ ಗೆಲ್ಲುವ ವಿಶ್ವಾಸವಿದ್ದು, ಸೂಕ್ತ ಅಭ್ಯರ್ಥಿಗಳನ್ನು ಶೀಘ್ರವೇ ಘೋಷಿಸುತ್ತೇವೆ’ ಎಂದಿದ್ದಾರೆ.
‘ಆಪರೇಷನ್ ಕಮಲವನ್ನು ಹಿಮ್ಮೆಟ್ಟಿಸಿ ಶಿರಾ ಕ್ಷೇತ್ರವನ್ನುಉಳಿಸಿಕೊಂಡಿದ್ದೆವು. ಸತ್ಯನಾರಾಯಣ ಅವರು ಬಿಜೆಪಿಯವರ ಆಮಿಷಕ್ಕೆ ಆಕರ್ಷಿತರಾಗದೇ ಕ್ಷೇತ್ರವನ್ನು ಜೆಡಿಎಸ್‌ಗೆ ಉಳಿಸಿಕೊಟ್ಟಿದ್ದರು. ಅಲ್ಲಿ ಜೆಡಿಎಸ್ ಸೂತಕದ ನಡುವೆ ಚುನಾವಣೆ ಎದುರಿಸುತ್ತಿದೆ. ಇತರರಿಗೆ ಅದು ಲಾಭ– ನಷ್ಟದ ಲೆಕ್ಕಾಚಾರ. ನಾವು ಗೆಲುವಿನ ಮೂಲಕ ಪರಿ
ಹಾರ ಹುಡುಕುತ್ತಿದ್ದೇವೆ’ ಎಂದಿದ್ದಾರೆ.
ಜೆಡಿಎಸ್ ಸಭೆಯಲ್ಲಿ ಹನುಮಂತರಾಯಪ್ಪ!:ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆಪ್ತರೂ ಆಗಿರುವ ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ಕೂಡ ಜೆಡಿಎಸ್ ಮುಖಂಡರ ಸಭೆಯಲ್ಲಿ ಪಾಲ್ಗೊಂಡಿದ್ದರು. ಅವರು ಕಾಂಗ್ರೆಸ್ ಸೇರುವ ಮೊದಲು ಜೆಡಿಎಸ್‌ನಲ್ಲಿ ಸಕ್ರಿಯರಾಗಿದ್ದರು. ನಗರಸಭೆ ಅಧ್ಯಕ್ಷರಾಗಿದ್ದ ಹನುಮಂತರಾಯಪ್ಪ, ಒಮ್ಮೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.