ADVERTISEMENT

ಬನ್ನೇರುಘಟ್ಟದಲ್ಲಿ ಬೀಡುಬಿಟ್ಟ 85 ಆನೆಗಳು

ತಮಿಳುನಾಡು ಕಡೆಯಿಂದ ವಲಸೆ ಬರುತ್ತಿರುವ ಗಜಪಡೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 8:36 IST
Last Updated 12 ಆಗಸ್ಟ್ 2019, 8:36 IST
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕೊಳದಲ್ಲಿ ನೀರು ಕುಡಿಯುತ್ತಿರುವ ಆನೆ -ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕೊಳದಲ್ಲಿ ನೀರು ಕುಡಿಯುತ್ತಿರುವ ಆನೆ -ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್   

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುತ್ತಮುತ್ತ 85 ಆನೆಗಳು ಬೀಡುಬಿಟ್ಟಿದ್ದು ಅಧಿಕಾರಿಗಳ ನಿದ್ದೆಗೆಡಿಸಿವೆ.

ಯೋಜನಾರಹಿತವಾದ ಅಭಿವೃದ್ಧಿ ಕಾಮಗಾರಿಗಳಿಂದ ಆನೆಗಳ ವಲಸೆ ಪಥಕ್ಕೆ ಧಕ್ಕೆಯಾಗಿದೆ. ಮಾತ್ರವಲ್ಲ ಅರಣ್ಯ ಮತ್ತು ಪರಿಸರ ಸಚಿವಾಲಯವು ಇತ್ತೀಚೆಗೆ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನು 168.84 ಚದರ ಕಿಲೊ ಮೀಟರ್‌ಗೆ (ಈ ಹಿಂದೆ268.96 ಚದರ ಕಿಲೊ ಮೀಟರ್‌ ಇತ್ತು) ಇಳಿಸಿದ ಬಳಿಕ ಈ ಉದ್ಯಾನ ಸಾಕಷ್ಟು ಮಹತ್ವ ಪಡೆದಿದೆ.

‘ಉದ್ಯಾನವು ಸುಮಾರು 10 ಸಾವಿರ ಚದರ ಕಿಲೊ ಮೀಟರ್‌ ವ್ಯಾಪ್ತಿಯಷ್ಟು ವಿಸ್ತಾರವಿದೆ. 32 ಆನೆಗಳು ಈ ಪ್ರದೇಶದಲ್ಲಿ ವಾಸಿಸುತ್ತಿವೆ. 45 ಆನೆಗಳು ತಮಿಳುನಾಡು ಹಾಗೂ ಬೇರೆ ಕಾಡುಗಳಿಂದ ಬಂದಿವೆ. 5, 9 ಆನೆಗಳನ್ನೊಳಗೊಂಡ ಗುಂಪುಗಳು ಬಂದಿವೆ. ಎರಡು ಹಿಂಡುಗಳಲ್ಲಿ ಮರಿಯಾನೆಗಳೂ ಇವೆ. ಕೆಲವು ಒಂಟಿ ಸಲಗಗಳು ಹೆಣ್ಣಾನೆ ಹುಡುಕಿಕೊಂಡು ಬಂದಿವೆ. ಅವುಗಳ ಚಲನವಲನಗಳ ಮೇಲೆ ಸಿಬ್ಬಂದಿ ನಿಗಾ ವಹಿಸಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

‘ರಾಗಿ, ಬಾಳೆಹಣ್ಣು, ಶೇಂಗಾ ಬೆಳೆ ಉದ್ಯಾನದ ಆಸುಪಾಸಿನಲ್ಲಿ ಸಮೃದ್ಧವಾಗಿ ಬೆಳೆದಿದೆ. ಇದು ಆನೆಗಳನ್ನು ಸೆಳೆಯುತ್ತಿದೆ. ಉದ್ಯಾನದೊಳಗಿನ ಎಲ್ಲ 146 ನೀರಿನ ಹೊಂಡಗಳು ತುಂಬಿವೆ. ಅರಣ್ಯದೊಳಗೆ ಸಾಕಷ್ಟು ಪ್ರಮಾಣದ ಆಹಾರವೂ ಲಭ್ಯ ಇದೆ. ಆನೆಗಳು ಈಗಾಗಲೆ ರಾಗಿಹಳ್ಳಿ, ಶಿವನಹಳ್ಳಿ, ಭೂತನಹಳ್ಳಿ, ಬ್ಯಾಟರಾಯನದುರ್ಗ, ತಮ್ಮನಾಯಕನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಡುಬಿಟ್ಟಿವೆ’ ಎಂದು ಉದ್ಯಾನ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಪ್ರಶಾಂತ್‌ ಹೇಳಿದರು.

‘ಆನೆಗಳು ತಮಿಳುನಾಡು ಅರಣ್ಯ ಪ್ರದೇಶದ ಕೊನೆಯ ಭಾಗದಿಂದ ಇತ್ತ ವಲಸೆ ಬರುತ್ತಿವೆ. ಅವುಗಳಿಗೆ ಉದ್ಯಾನವು ಸುರಕ್ಷಿತ ಪ್ರದೇಶವೆನಿಸಿದೆ. ಆದರೆ, ಬನ್ನೇರುಘಟ್ಟ ಮತ್ತು ಆನೇಕಲ್‌ ನಡುವೆ ಸಾಕಷ್ಟು ಸಮಸ್ಯಾತ್ಮಕ ಪ್ರದೇಶಗಳು ಇವೆ. ಈ ನಿಟ್ಟಿನಲ್ಲಿ ನಾವು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದೇವೆ. ಆನೆಸ್ನೇಹಿ ಬೆಳೆಗಳನ್ನು ಬೆಳೆಯದಂತೆ ಮನವಿ ಮಾಡಿದ್ದೇವೆ. ಆದರೆ, ಏನೂ ಪರಿಣಾಮ ಆಗಿಲ್ಲ’ ಎಂದು ಅಧಿಕಾರಿಗಳು ಹೇಳಿದರು.

‘ಈಗ ಒಣ ಹವಾಮಾನ ಇರುವುದರಿಂದ ನಾವು ಆತಂಕಕ್ಕೊಳಗಾಗಿದ್ದೇವೆ.ಆನೆಗಳು ಈಗಾಗಲೇ ಬೆಳೆಗಳ ರುಚಿ ನೋಡಲು ಆರಂಭಿಸಿವೆ. ಕೆಲವೆಡೆ ಆನೆ ಬೆದರಿಸಲು ಬೆಂಕಿ ಪಥ (ಫೈರ್‌ ಲೈನ್‌) ರೂಪಿಸಲಾಗಿದೆ. ಆದರೆ, ರೈತರು ಆನೆಗಳನ್ನು ಬೆದರಿಸಲು ಕಾಡಿನ ಅಂಚಿನಲ್ಲಿ ಬೆಂಕಿ ಹಾಕಬಾರದು. ನಾವು ಅರಣ್ಯ ಒತ್ತುವರಿ ಮತ್ತು ಗಣಿಗಾರಿಕೆ ಚಟುವಟಿಕೆಗಳನ್ನು ನಿಯಂತ್ರಿಸುವ ಒತ್ತಡದಲ್ಲಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಇದುವರೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು 12 ಕಿಲೊ ಮೀಟರ್‌ನಷ್ಟು ರೈಲ್ವೆ ಬ್ಯಾರಿಕೇಡ್‌ (ಆನೆಗಳು ಹಳಿ ದಾಟದಂತೆ ತಡೆಗೋಡೆ) ಹೊಂದಿದೆ. ಇನ್ನೂ 5 ಕಿಲೊ ಮೀಟರ್‌ಗಳಷ್ಟು ಉದ್ದದ ಬ್ಯಾರಿಕೇಡ್‌ ನಿರ್ಮಿಸಲಾಗುವುದು. ಇದೇ ಬ್ಯಾರಿಕೇಡ್‌ಗಳನ್ನು ನಗರದವರೆಗೆ ವಿಸ್ತರಿಸಿದರೆ ನಗರ ಪ್ರದೇಶದಲ್ಲಿ ಒತ್ತುವರಿ ಮತ್ತು ಆನೆಗಳ ಚಲನವಲನಗಳನ್ನು ನಿಯಂತ್ರಿಸಬಹುದು’ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.