ADVERTISEMENT

‘ವೈಟ್‌ ಟಾಪಿಂಗ್‌ ರಸ್ತೆ ಅಗೆಯಬೇಕು’

ಕಾರಿಡಾರ್‌: ಸಾರ್ವಜನಿಕರಿಂದ ಸಾಮಾಜಿಕ ಪರಿಣಾಮದ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 15 ಮೇ 2019, 20:45 IST
Last Updated 15 ಮೇ 2019, 20:45 IST
ವೈಟ್‌ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಬಿಟಿಎಸ್‌ ರಸ್ತೆಯಲ್ಲಿಯೇ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣ ಆಗಲಿದ್ದು, ಈ ಪ್ರದೇಶದಲ್ಲಿ ವಿವಿಧ ಸಂಘಟನೆಗಳ ಸ್ವಯಂಸೇವಕರು ಸಾಮಾಜಿಕ ಪರಿಣಾಮದ ಅಧ್ಯಯನ ನಡೆಸಿದರು
ವೈಟ್‌ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಬಿಟಿಎಸ್‌ ರಸ್ತೆಯಲ್ಲಿಯೇ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣ ಆಗಲಿದ್ದು, ಈ ಪ್ರದೇಶದಲ್ಲಿ ವಿವಿಧ ಸಂಘಟನೆಗಳ ಸ್ವಯಂಸೇವಕರು ಸಾಮಾಜಿಕ ಪರಿಣಾಮದ ಅಧ್ಯಯನ ನಡೆಸಿದರು   

ಬೆಂಗಳೂರು: ನಗರದಲ್ಲಿ ನಿರ್ಮಿಸಲು ಯೋಜಿಸಿರುವ ಎಲಿವೇಟೆಡ್‌ ಕಾರಿಡಾರ್‌ನ ಉತ್ತರ–ದಕ್ಷಿಣ ಮಾರ್ಗವೊಂದಕ್ಕೆ 250ಕ್ಕೂ ಹೆಚ್ಚು ಕಟ್ಟಡಗಳನ್ನು ನೆಲಸಮ ಮಾಡಬೇಕಾಗುತ್ತದೆ. ಬೀದಿಬದಿಯ ನೂರಾರು ವ್ಯಾಪಾರಿಗಳು ಜೀವನೋಪಾಯದ ದಾರಿ ಕಳೆದುಕೊಳ್ಳಲಿದ್ದಾರೆ. ಕೆಲವೆಡೆ ವೈಟ್‌ ಟಾಪಿಂಗ್‌ ಮಾಡಿರುವ ರಸ್ತೆಗಳನ್ನು ಅಗೆಯಬೇಕಾಗುತ್ತದೆ

ಎಲಿವೇಟೆಡ್‌ ಕಾರಿಡಾರ್‌ನಿಂದ ಉಂಟಾಗುವ ಸಾಮಾಜಿಕ ಪರಿಣಾಮಗಳ ಕುರಿತು ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ, ಸಿಟಿಜನ್ಸ್‌ ಫಾರ್‌ ಬೆಂಗಳೂರು, ದಿ ಸ್ಟೂಡೆಂಟ್‌ ಔಟ್‌ ಪೋಸ್ಟ್‌ ಸೇರಿದಂತೆ ವಿವಿಧ ಸಂಘಟನೆಗಳು ಸೇರಿ ನಡೆಸಿರುವ ಅಧ್ಯಯನದಲ್ಲಿ ಕಂಡುಬಂದ ಅಂಶಗಳಿವು. ಕಾರಿಡಾರ್ ಹಾದು ಹೋಗಲಿರುವ ಶಾಂತಿನಗರ ಬಸ್‌ ನಿಲ್ದಾಣದಿಂದ ಬನ್ನೇರುಘಟ್ಟ ರಸ್ತೆಯವರೆಗೂ ಈ ಸಂಘಟನೆಗಳು ಸಮೀಕ್ಷೆ ನಡೆಸಿವೆ.

‘ಕಾರಿಡಾರ್‌ ನಿರ್ಮಾಣಗೊಳ್ಳುವ ಬಿಟಿಎಸ್‌ ರಸ್ತೆಯಲ್ಲಿ ಈಗ ವೈಟ್‌ ಟಾಪಿಂಗ್ ನಡೆಯುತ್ತಿದೆ. ಕಾರಿಡಾರ್‌ ಕಾಮಗಾರಿಗಾಗಿ ಕೋಟಿಗಟ್ಟಲೇ ಖರ್ಚು ಮಾಡಿ ನಿರ್ಮಿಸಿದ ಈ ರಸ್ತೆಯನ್ನೂ ಅಗೆಯಬೇಕಾಗುತ್ತದೆ. ರ‍್ಯಾಂಪ್‌ ನಿರ್ಮಾಣಕ್ಕೆ ಕೆಎಸ್‌ಆರ್‌ಟಿಸಿ ಕಚೇರಿಯ ಬಹಳಷ್ಟು ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ’ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

‘ಈ ಯೋಜನೆಗಾಗಿ ಹಲವಾರು ಮನೆಗಳನ್ನು ಹಾಗೂ ಅಂಗಡಿಗಳನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ. ಶಾಂತಿ ನಗರದ ಬಿಟಿಎಸ್‌ ಮುಖ್ಯ ರಸ್ತೆ 12 ಮೀಟರ್‌ ಅಗಲವಿದೆ. ಇಲ್ಲಿ ಹಾದು ಹೋಗಲಿರುವ ಕಾರಿಡಾರ್‌ನ ಅಗಲ 19 ಮೀಟರ್‌. ಹಾಗಾಗಿ ಇಲ್ಲಿ ಭೂಸ್ವಾಧೀನ ಮಾಡಲೇಬೇಕಾಗುತ್ತದೆ’ ಎಂದು ಸಮೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಈ ಯೋಜನೆಯಿಂದ ರಸ್ತೆ ಬದಿಯ ವ್ಯಾಪಾರಿಗಳೂ ಬೀದಿ ಪಾಲಾಗುತ್ತಾರೆ. ಕಾರಿಡಾರ್‌ ಕಾಮಗಾರಿ ವೇಳೆ ಮತ್ತು ಕಾರಿಡಾರ್‌ ನಿರ್ಮಾಣವಾದ ಬಳಿಕ ವ್ಯಾಪಾರ ಮಾಡಲು ಅವಕಾಶ ಇರುತ್ತದೆಯೋ, ಇಲ್ಲವೋ ಎಂಬ ಆತಂಕ ವ್ಯಾಪಾರಿಗಳನ್ನು ಕಾಡುತ್ತಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ರಾಜ್ಯ ಸರ್ಕಾರ ₹ 26,690 ಕೋಟಿ ವೆಚ್ಚದಲ್ಲಿ 87.87 ಕಿ.ಮೀ. ಉದ್ದದ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣದ ಯೋಜನೆ ರೂಪಿಸಿದೆ. ಇದರ ಮೊದಲ ಹಂತದಲ್ಲಿ ಉತ್ತರ–ದಕ್ಷಿಣ ಕಾರಿಡಾರ್‌ ಕಾಮಗಾರಿ ನಡೆಯಲಿದ್ದು ಇದಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಕಾಮಗಾರಿಯ ಮೂರನೇ ಪ್ಯಾಕೇಜ್‌ನಲ್ಲಿ ಶಾಂತಿನಗರದಿಂದ ಸಿಲ್ಕ್‌ ಬೋರ್ಡ್‌ ವರೆಗೆ 7.22 ಕಿ.ಮೀ. ಉದ್ದದ ಕಾರಿಡಾರ್‌ ನಿರ್ಮಾಣ ಆಗಲಿದೆ.

ಹೈಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ಸದ್ಯ ಈ ಯೋಜನೆಯಲ್ಲಿ ಯಾವುದೇ ಪ್ರಗತಿ ಆಗುತ್ತಿಲ್ಲ.

214 ಮರಗಳು ಬಲಿ?

‘ಕೆಎಸ್‌ಆರ್‌ಟಿಸಿ ಕಚೇರಿ ಆಸುಪಾಸಿನಲ್ಲಿ ಹಾಗೂ ಬಿಟಿಎಸ್‌ ಮುಖ್ಯ ರಸ್ತೆ ಪಕ್ಕದಲ್ಲಿ 274 ಮರಗಳಿವೆ. ಅದರಲ್ಲಿ ಎಷ್ಟು ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಬಿಟಿಎಸ್‌ ಮುಖ್ಯ ರಸ್ತೆ ವಿಸ್ತರಣೆ ಅನಿವಾರ್ಯ. ಹಾಗಾಗಿ 214 ಮರಗಳು ಧರೆಗೆ ಉರುಳುವುದಂತೂ ನಿಚ್ಚಳ’ ಎಂದು ಸಮೀಕ್ಷೆ ಹೇಳುತ್ತಿದೆ.

‘ಮಾಹಿತಿಯೇ ಇಲ್ಲ’

‘ಕಾರಿಡಾರ್‌ಗಾಗಿ ಕೆಡವಬೇಕಾದ ಕಟ್ಟಡಗಳ ಮೇಲೆ ಹಳದಿ ಬಣ್ಣದ ಗುರುತು ಹಾಕಲಾಗಿದೆ. ಈ ಕುರಿತು ಕಟ್ಟಡದ ಮಾಲೀಕರಿಗೆ ಹಾಗೂ ಅದರಲ್ಲಿ ಬಾಡಿಗೆಗೆ ಇರುವವರಿಗೆ ಯಾವುದೇ ಮಾಹಿತಿ ಇಲ್ಲ’ ಎಂಬುದನ್ನು ಸಮೀಕ್ಷೆ ಬೊಟ್ಟು ಮಾಡಿದೆ.

‘ಈ ಕಾರಿಡಾರ್‌ ನಿರ್ಮಾಣ ಆಗುತ್ತಿರುವ ಕುರಿತು ಬಹುತೇಕ ಸ್ಥಳೀಯರಿಗೆ ಮಾಹಿತಿಯೇ ಇಲ್ಲ. ಕೆಲವರು ಈ ಕಾರಿಡಾರ್‌ ರಾಜಕಾಲುವೆಯಲ್ಲಿ ನಿರ್ಮಾಣವಾಗುತ್ತದೆ. ನಮ್ಮ ಮನೆ ಬದಲು ಪಕ್ಕದ ಪ್ರದೇಶದಲ್ಲಿ ನಿರ್ಮಾಣ ಆಗುತ್ತದೆ ಎಂದು ಭಾವಿಸಿದ್ದಾರೆ. ಸಮೀಕ್ಷೆ ವೇಳೆ ಯೋಜನೆ ಕುರಿತು ವಿವರಿಸಿದಾಗ ಅನೇಕರು ಅಚ್ಚರಿ ವ್ಯಕ್ತಪಡಿಸಿದರು’ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದವರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.