ಹೆಸರಘಟ್ಟ: ಬೆಂಗಳೂರು ಉತ್ತರ ವಲಯ-4ರ ವ್ಯಾಪ್ತಿಗೆ ಬರುವ ಎಲ್ಲಾ 245 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಬಿ.ಕೆ.ಪ್ರಕಾಶ್ ತಿಳಿಸಿದರು.
ಚಲ್ಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿಇಂಗ್ಲಿಷ್ ಮಾಧ್ಯಮ ತರಗತಿಯ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿ ಆರಂಭಿಸಿರುವುದರಿಂದ ಬಡವರ್ಗದ ಮಕ್ಕಳು ದುಬಾರಿ ಶುಲ್ಕ ನೀಡಿ ಖಾಸಗಿ ಶಾಲೆಗೆ ಹೋಗುವುದು ತಪ್ಪುತ್ತದೆ. ಹಾಗೆಯೇ, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗುತ್ತದೆ’ ಎಂದರು.
ಇಟಗಲ್‌ಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಮೋಹನ್‌ಕುಮಾರ್ ಮಾತನಾಡಿ, ‘ಗ್ರಾಮೀಣ ಭಾಗದ ಪೋಷಕರು ತಮ್ಮ ಮಕ್ಕಳನ್ನು ದುಪ್ಪಟ್ಟು ಶುಲ್ಕ ಕೊಟ್ಟು ಖಾಸಗಿ ಶಾಲೆಗಳಿಗೆ ಕಳಿಸುವುದನ್ನು ನಿಲ್ಲಿಸಿ, ಸರ್ಕಾರಿ ಶಾಲೆಗಳಿಗೆ ಕಳಿಸಿ’ ಎಂದು ಮನವಿ ಮಾಡಿದರು.
ಮೆರವಣಿಗೆ: ಇದೇ ವೇಳೆ ‘ಮಕ್ಕಳನ್ನು ಸರ್ಕಾರಿ ಶಾಲೆಯ ಇಂಗ್ಲಿಷ್ ಮಾಧ್ಯಮ ತರಗತಿಗೆ ದಾಖಲಿಸಿ; ಶಿಕ್ಷಣ ಸೇರಿ ಎಲ್ಲ ಸೌಕರ್ಯಗಳನ್ನು ಉಚಿತವಾಗಿ ನೀಡಲಾಗುವುದು’ ಎಂಬ ಬ್ಯಾನರ್ ಹಿಡಿದ ಮಕ್ಕಳು ಹಾಗೂ ಪೋಷಕರು ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಪೋಷಕರು ಶಾಲೆಯ ಆವರಣವನ್ನು ಬಾಳೆ ಕಂದು, ಮಾವಿನ ತೋರಣ ಕಟ್ಟಿ, ಹೂವಿನ ಅಲಂಕಾರ ಮಾಡಿ ಸಿಂಗರಿಸಿದ್ದರು. ನಂತರ ಕಾರ್ಯಕ್ರಮದಲ್ಲಿದ್ದವರಿಗೆ ಸಿಹಿಹಂಚಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಸೊಣ್ಣೇನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಮ್ಯಾ ರಾಧಾಕೃಷ್ಣ, ಪಿಡಿಒ ಭಾಸ್ಕರ್, ಸಿಆರ್‌ಪಿ ಶೇಷಾದ್ರಿ, ಮುಖ್ಯ ಶಿಕ್ಷಕ ವೆಂಕಟಾಚಲಯ್ಯ, ಗ್ರಾಮದ ಮುಖಂಡರಾದ ರಾಜಣ್ಣ, ವಿಶ್ವನಾಥ್, ರಾಮಯ್ಯ, ರವಿಕುಮಾರ್, ಚೇತನ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.