ADVERTISEMENT

ಪಿಯು ಕಾಲೇಜುಗಳಲ್ಲಿ ದಾಖಲಾತಿ ಚುರುಕು

ಅರ್ಜಿಗಾಗಿ ವಿದ್ಯಾರ್ಥಿಗಳ ಸರದಿ ಸಾಲು lಡಿಪ್ಲೊಮಾ, ಐಟಿಐ ಪ್ರವೇಶಕ್ಕೂ ಪೈಪೋಟಿ

ಗುರು ಪಿ.ಎಸ್‌
Published 10 ಆಗಸ್ಟ್ 2021, 20:05 IST
Last Updated 10 ಆಗಸ್ಟ್ 2021, 20:05 IST
ಬೆಂಗಳೂರಿನ ಜಯನಗರದ ಎನ್.ಎಂ.ಕೆ.ಆರ್.ವಿ. ಪಿಯು ಕಾಲೇಜಿನಲ್ಲಿ ಪ್ರವೇಶಕ್ಕಾಗಿ ಅರ್ಜಿಗಳನ್ನು ಪಡೆದುಕೊಳ್ಳಲು ಸರದಿಯಲ್ಲಿ ನಿಂತಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಜಯನಗರದ ಎನ್.ಎಂ.ಕೆ.ಆರ್.ವಿ. ಪಿಯು ಕಾಲೇಜಿನಲ್ಲಿ ಪ್ರವೇಶಕ್ಕಾಗಿ ಅರ್ಜಿಗಳನ್ನು ಪಡೆದುಕೊಳ್ಳಲು ಸರದಿಯಲ್ಲಿ ನಿಂತಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಪ್ರವೇಶಕ್ಕಾಗಿ ಅರ್ಜಿ ಪಡೆಯಲು ರಾಜ್ಯದ ಎಲ್ಲೆಡೆ ಕಾಲೇಜುಗಳ ಮುಂದೆ ವಿದ್ಯಾರ್ಥಿಗಳ ಉದ್ದನೆಯ ಸಾಲು ಸಾಮಾನ್ಯವಾಗಿದೆ.

ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮದ ಕೆಲವು ಕಾಲೇಜುಗಳಲ್ಲಿ ಈಗಾಗಲೇ 11ನೇ ತರಗತಿಯ ದಾಖಲಾತಿ ಪೂರ್ಣಗೊಂಡಿದ್ದು, ತರಗತಿಗಳೂ ಆರಂಭವಾಗಿವೆ. ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿಕಾಲೇಜುಗಳಲ್ಲಿ ಅರ್ಜಿ ವಿತರಣೆ ನಡೆಯುತ್ತಿದೆ.

ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗ ಮಾತ್ರವಲ್ಲದೆ, ಡಿಪ್ಲೊಮಾ, ಐಟಿಐನಂತಹ ವೃತ್ತಿಪರ ಕೋರ್ಸ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ. ಕೆಲವು ಪ್ರತಿಷ್ಠಿತ ಖಾಸಗಿ ಕಾಲೇಜುಗಳು, ಪಿಯು ಮತ್ತು ಪದವಿ ದಾಖಲಾತಿಗೆ ಪ್ರವೇಶ ಪರೀಕ್ಷೆಯನ್ನೂ ನಡೆಸುತ್ತಿವೆ. ಹೊಸ ವಿಭಾಗ, ಹೊಸ ಕೋರ್ಸ್‌ಗಳೂ ಪ್ರಾರಂಭವಾಗಿವೆ. ಕಲಾ ವಿಭಾಗಕ್ಕೆ ದಾಖಲಾಗಲು ಬಯಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ.

ADVERTISEMENT

‘ಕಲಾ ವಿಭಾಗ ಆಯ್ಕೆಮಾಡಿಕೊಳ್ಳುತ್ತಿರುವವರ ಸಂಖ್ಯೆ ಕಳೆದ ಬಾರಿಗಿಂತ ಈ ಸಲ ಹೆಚ್ಚಾಗಿದೆ. ಪದವಿ ನಂತರ ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳು ನಡೆಸುವ ಪರೀಕ್ಷೆ ತೆಗೆದುಕೊಳ್ಳಬೇಕು ಎಂಬ ಉದ್ದೇಶದಿಂದ ಈ ವಿಭಾಗವನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಸರ್ಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಟಿ. ಶಶಿಕಲಾ ಹೇಳಿದರು.

‘ವಿಜ್ಞಾನ ಮತ್ತು ಗಣಿತದಲ್ಲಿ ಹೆಚ್ಚು ಅಂಕಗಳು ಬಂದಿದ್ದರೂ, ಕಲಾ ವಿಭಾಗದಲ್ಲಿ ನನಗೆ ಆಸಕ್ತಿ ಇದೆ. ಇದೇ ವಿಭಾಗದಲ್ಲಿನ ಸಂಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದು ವಿದ್ಯಾರ್ಥಿ ರಮೇಶ್‌ ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.