ಬೆಂಗಳೂರು: ಕೇಂದ್ರ ಕಸ್ಟಮ್ಸ್ ಅಧಿಕಾರಿಗಳು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಕಾರ್ಗೋ ವಿಭಾಗದಿಂದ ಅಂದಾಜು ₹ 5.05 ಕೋಟಿ ಮೌಲ್ಯದ 5.049 ಕೆ.ಜಿ ತೂಕದ ನಿಷೇಧಿತ ಮಾದಕ ವಸ್ತು ಎಫಿಡ್ರಿನ್ ಅನ್ನು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಕಳೆದ ಮೂರು ದಿನಗಳಲ್ಲಿ ಎರಡನೇ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಮಾದಕ ವಸ್ತುಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದೇ 18ರಂದು ಅಧಿಕಾರಿಗಳು ₹ 5 ಕೋಟಿ ಮೌಲ್ಯದ ಎಫಿಡ್ರಿನ್ ವಶಪಡಿಸಿಕೊಂಡಿದ್ದರು.
ಕಸ್ಟಮ್ಸ್ ಏರ್ ಕಾರ್ಗೋದ ಗುಪ್ತಚರ ವಿಭಾಗದ ಅಧಿಕಾರಿಗಳಿಗೆ ಸಿಕ್ಕ ಸುಳಿವಿನ ಆಧಾರದಲ್ಲಿ ಶುಕ್ರವಾರ ಕಾರ್ಗೋ ಮೂಲಕ ಬಂದ ಸರಕು ತಪಾಸಣೆ ವೇಳೆ ಆಮಂತ್ರಣ ಪತ್ರಿಕೆಗಳ ಜೊತೆ ಇದ್ದ ಪೌಚ್‌ನಲ್ಲಿ ಮಾದಕ ವಸ್ತು ಪತ್ತೆಯಾಗಿದೆ.
43 ಆಮಂತ್ರಣ ಪತ್ರಿಕೆಗಳು ಮತ್ತು ಬಟ್ಟೆಬರೆಗಳಿದ್ದ ಸರಕಿನಲ್ಲಿ ಮಾದಕವಸ್ತು ಸಾಗಣೆ ಪತ್ತೆಯಾಗಿದೆ. ಆಮಂತ್ರಣ ಪತ್ರಿಕೆಗಳ ಬದಿಗಳಿಗೆ ಅಳವಡಿಸಿದ್ದ 86 ಪಾಲಿಥಿನ್ ಪದರಗಳ ಒಳಗೆ ಬಿಳಿ ಪೌಡರ್ ತುಂಬಿಸಲಾಗಿತ್ತು. ಈ ಪೌಡರ್ ಪರಿಶೀಲನೆಗೆ ಒಳಪಡಿಸಿದಾಗ ಮಾದಕ ವಸ್ತು ಎನ್ನುವುದು ದೃಡಪಟ್ಟಿದೆ.
'ಎಲ್ಲಿಂದ ಹಾಗೂ ಯಾರ ಮೂಲಕ ರವಾನಿಸಲಾಗುತ್ತಿತ್ತು ಎನ್ನುವುದರ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗುವುದು' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೋವು ನಿವಾರಕ ತಯಾರಿಕೆಗೆ ಬಳಕೆ: ನೋವು ನಿವಾರಕ ಸೇರಿದಂತೆ ನಾನಾ ರೀತಿಯ ಔಷಧಿಗಳ ತಯಾರಿಕೆಗೆ ಬಳಸುವ ಎಫಿಡ್ರಿನ್ ಸಾಗಣೆ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ. ವೈದ್ಯಕೀಯ ಉದ್ದೇಶ ಹೊರತುಪಡಿಸಿ ಇತರ ಉದ್ದೇಶಗಳಿಗೆ ಇವುಗಳನ್ನು ಬಳಸಿದರೆ ಅದು 1985ರ ಮಾದಕ ವಸ್ತು ನಿಷೇಧಿತ ಕಾಯ್ದೆ ಅಡಿಯಲ್ಲಿ ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಇದೇ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.