ರಾಜ್ಯ ಮಹಿಳಾ ಸಮ್ಮೇಳನಕ್ಕೆ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಇ. ರವೀಶ್ ಚಾಲನೆ ನೀಡಿದರು.
ಪೀಣ್ಯ ದಾಸರಹಳ್ಳಿ: ‘ಮಹಿಳೆಯರ ಸಾಧನೆಗಳನ್ನು ಗುರುತಿಸುವ ಮೂಲಕ ಸಮಾನ ಸ್ಥಾನಮಾನ ನೀಡುತ್ತಿರುವುದು ಶ್ಲಾಘನೀಯ’ ಎಂದು ಲೇಖಕಿ ಕಮಲಾ ರಾಜೇಶ್ ಅಭಿಪ್ರಾಯಪಟ್ಟರು.
ಬಾಗಲಗುಂಟೆಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ, ವಿಶ್ವ ಕನ್ನಡ ಕಲಾ ಸಂಸ್ಥೆಗಳ ಆಶ್ರಯದಲ್ಲಿ ನಡೆದ ವಿಶ್ವ ಕನ್ನಡ ರಾಜ್ಯಮಟ್ಟದ ಪ್ರಥಮ ಮಹಿಳಾ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
’ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲ, ರಕ್ಷಣಾ ಕ್ಷೇತ್ರದಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿಗಳಾಗಿದ್ದಾರೆ. ಸಿನಿಮಾ ನಿರ್ದೇಶಕಿಯರಾಗಿದ್ದಾರೆ. ಆರ್ಥಿಕ, ರಾಜಕೀಯ ಸಹಿತ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.
‘18 ಮತ್ತು 19ನೆಯ ಶತಮಾನದಲ್ಲಿ ಲಿಂಗ ಸಮಾನತೆಗಾಗಿ ಹೋರಾಟ ನಡೆಯಿತು. ಮತದಾನದ ಹಕ್ಕಿಗಾಗಿ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಹೋರಾಟಗಳಾದವು. ಆನಂತರ ಸರ್ಕಾರಿ ವಲಯದಲ್ಲಿಯೂ ‘ವೇತನದಲ್ಲಿ ಲಿಂಗ ತಾರತಮ್ಯ’ದ ವಿರುದ್ಧ ಧ್ವನಿ ಎತ್ತಲಾಯಿತು. ಹೀಗೆ ಸಮಾನತೆಗಾಗಿ ಹೋರಾಟ ನಿರಂತರವಾಗಿ ನಡೆದಿದೆ’ ಎಂದು ನೆನಪಿಸಿದರು.
ಸೂರಜ್ ಫೌಂಡೇಶನ್ ಅಧ್ಯಕ್ಷೆ ಸುಜಾತಾ ಮುನಿರಾಜು ಮಾತನಾಡಿ, ‘ಮಹಿಳೆಯರೂ ಶಿಕ್ಷಣ ಪಡೆದು ಸಮಾಜದಲ್ಲಿ ವಿವಿಧ ಸ್ತರಗಳಲ್ಲಿ ಕಾಲಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ. ಕಾಲಕ್ಕೆ ತಕ್ಕಂತೆ ಬದಲಾಗಿದ್ದಾರೆ’ ಎಂದು ತಿಳಿಸಿದರು.
ಸಾಹಿತಿ ವೈ.ಬಿ.ಎಚ್ ಜಯದೇವ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ವಿವಿಧ ಜಿಲ್ಲೆಗಳ ಕವಿಗಳು ಕವನ ವಾಚಸಿದರು. ವಿಚಾರಗೋಷ್ಠಿ, ಪ್ರಶಸ್ತಿ ಪ್ರದಾನ, ವಿವಿಧ ಲೇಖಕರ ಪುಸ್ತಕ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಂಸ್ಥೆಯ ಅಧ್ಯಕ್ಷ ಈ. ರವೀಶ್, ಗೌರವಾಧ್ಯಕ್ಷೆ ಆರ್. ಶೈಲಜಾ ಬಾಬು, ಖಜಾಂಚಿ ಬಿ.ಟಿ. ಸವಿತಾ, ಉಪಾಧ್ಯಕ್ಷ ಬಿ.ಇ. ರಮೇಶ್, ಭೂಮಿಕಾ ಸೇವಾ ಫೌಂಡೇಶನ್ ಅಧ್ಯಕ್ಷೆ ಲತಾ ಕುಂದರಗಿ, ಸುಜಾತ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.