ADVERTISEMENT

ಬೆಂಗಳೂರು: ಸಚಿವಾಲಯದ ನೌಕರರಿಗೆ ಇವಿ ಮೇಳ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2024, 14:29 IST
Last Updated 29 ನವೆಂಬರ್ 2024, 14:29 IST
<div class="paragraphs"><p>ವಿದ್ಯುತ್ ಚಾಲಿತ ವಾಹನ</p></div>

ವಿದ್ಯುತ್ ಚಾಲಿತ ವಾಹನ

   

ಸಾಂಕೇತಿಕ ಚಿತ್ರ

ಬೆಂಗಳೂರು: ವಿದ್ಯುತ್‌ಚಾಲಿತ ವಾಹನಗಳ (ಇವಿ) ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸಚಿವಾಲಯದ ನೌಕರರಿಗಾಗಿ 2025ರ ಜನವರಿಯಲ್ಲಿ ವಿಶೇಷ ಇವಿ ಮೇಳ ಆಯೋಜನೆಗೆ ನಿರ್ಧರಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹೇಳಿದರು.

ADVERTISEMENT

ಶುಕ್ರವಾರ ಬೆಸ್ಕಾಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ನಿರ್ದೇಶನದಂತೆ ಸಚಿವಾಲಯದ ನೌಕರಿಗಾಗಿ ಈ ಇವಿ ಮೇಳವನ್ನು ಆಯೋಜಿಸಲಾಗುತ್ತಿದೆ. ಇಂಧನ ಸಚಿವ ಕೆ.ಜೆ. ಜಾರ್ಜ್‌, ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ್‌ ಗುಪ್ತಾ ಅವರ ಮಾರ್ಗದರ್ಶನದಲ್ಲಿ ಮೇಳ ಜರುಗಲಿದೆ’ ಎಂದರು.

‘ಇವಿ ದ್ವಿಚಕ್ರ ವಾಹನ ಬಳಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ಇವಿ ವಾಹನಗಳ ಬಳಕೆಯ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವ ಜತೆಗೆ ಸರ್ಕಾರಿ ನೌಕರರು, ವಿಶೇಷವಾಗಿ ಸಚಿವಾಲಯ ನೌಕರರಿಗೆ ಮಾರಾಟಗಾರರಿಂದ ರಿಯಾಯ್ತಿ ದರದಲ್ಲಿ ಇವಿ ದ್ವಿಚಕ್ರ ವಾಹನಗಳನ್ನು ಒದಗಿಸುವುದು ಈ ಮೇಳದ ಉದ್ದೇಶವಾಗಿದೆ. ಪ್ರದರ್ಶನ ಸ್ಥಳದಲ್ಲೇ ಪ್ರಾಯೋಗಿಕವಾಗಿ ವಾಹನ ಓಡಿಸಲು ವ್ಯವಸ್ಥೆಯನ್ನೂ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಏರುತ್ತಿರುವ ವಾಹನಗಳ ಇಂಧನ ದರ, ನಗರದ ವಾಯುಮಾಲಿನ್ಯ ತಡೆಗೆ ಇವಿ ವಾಹನಗಳ ಬಳಕೆಯೇ ಪರಿಹಾರ. ವಿದ್ಯುತ್‌ಚಾಲಿತ ವಾಹನಗಳಿಗೆ ರಸ್ತೆ ತೆರಿಗೆ ಸಹ ಇರುವುದಿಲ್ಲ. ಸಚಿವಾಲಯ ನೌಕರರಿಗೆ ಮುಂಗಡ ಇಲ್ಲದೇ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವೂ ದೊರೆಯಲಿದೆ’ ಎಂದು ವಿವರಿಸಿದರು.

ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್‌ ಸಂಗಾ, ಬೆಸ್ಕಾಂನ ತಾಂತ್ರಿಕ ನಿರ್ದೇಶಕ ಎಚ್.ಜೆ. ರಮೇಶ್‌ ಹಾಗೂ ಇವಿ ವಾಹನಗಳ ತಯಾರಿಕಾ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.