ಬೆಂಗಳೂರು: ಪರೀಕ್ಷೆ ಕಾರ್ಯಗಳು ಹಾಗೂ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ತರುತ್ತಿರುವ ಬೆಂಗಳೂರು ವಿಶ್ವವಿದ್ಯಾಲಯ, ಮೌಲ್ಯಮಾಪನದ ಸಂಭಾವನೆಯನ್ನು ನೇರವಾಗಿ ಮೌಲ್ಯಮಾಪಕರ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತಹ ಡಿಜಿಟಲ್ ವ್ಯವಸ್ಥೆಯೊಂದನ್ನು ಇತ್ತೀಚೆಗೆ ಅನುಷ್ಠಾನಗೊಳಿಸಿದೆ.
ಈ ಡಿಜಿಟಲ್ ವ್ಯವಸ್ಥೆಯು ಗಣಕೀಕೃತ ಮೌಲ್ಯಮಾಪನ ಹಾಗೂ ಹಣಕಾಸು ವ್ಯವಸ್ಥೆ ಎರಡರ ಸಂಯೋಜನೆಯಾಗಿದೆ. ಈ ವ್ಯವಸ್ಥೆಯೊಂದಿಗೆ ಆನ್‌ಲೈನ್ ಬ್ಯಾಂಕಿಂಗ್ ಮುಖಾಂತರ ಆಯಾ ಮೌಲ್ಯಮಾಪಕರ ಖಾತೆಗೆ, ಸಂಭಾವನೆಯನ್ನು ತಲುಪಿಸಲಾಗುತ್ತಿದೆ.
‘ಮೌಲ್ಯಮಾಪನದಲ್ಲಿ ತೊಡಗಿಸಿಕೊಂಡಿದ್ದ ಎರಡು ಸಾವಿರಕ್ಕೂ ಹೆಚ್ಚು ಅಧ್ಯಾಪಕರ ಬ್ಯಾಂಕ್ ಖಾತೆಗೆ ₹3.37 ಕೋಟಿ ವರ್ಗಾವಣೆ ಮಾಡಲಾಗಿದೆ. ಒಂದು ವರ್ಷದಿಂದ ಡಿಜಿಟಲ್ ಪಾವತಿ ಮೂಲಕ ಅಧ್ಯಾಪಕರಿಗೆ ಪರೀಕ್ಷೆಯ ಸಂಭಾವನೆಯನ್ನು ಪಾವತಿ ಮಾಡಲಾಗುತ್ತಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ.ಸಿ. ಶ್ರೀನಿವಾಸ್ ತಿಳಿಸಿದ್ದಾರೆ.
‘ಸ್ಥಳೀಯವಾಗಿ ರೂಪಿಸಿರುವ ತಂತ್ರಜ್ಞಾನವನ್ನು ಈ ಡಿಜಿಟಲೀಕರಣಕ್ಕೆ ಅಳವಡಿಸಿಕೊಳ್ಳಲಾಗಿದೆ. ಈ ನೂತನ ವ್ಯವಸ್ಥೆಯಿಂದಾಗಿ ಹಣಕಾಸಿನ ನಿರ್ವಹಣಾ ವೆಚ್ಚವೂ ಕಡಿಮೆಯಾಗಿದೆ. ಅಧ್ಯಾಪಕರಿಗೆ ಸರಿಯಾದ ಸಮಯದಲ್ಲಿ ಸಂಭಾವನೆಯೂ ತಲುಪುತ್ತಿದೆ’ ಎಂದು ಅವರು ವಿವರಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯ ಪರೀಕ್ಷಾ ವಿಭಾಗವು ಪರೀಕ್ಷೆ ಕಾರ್ಯಗಳ ಸುಧಾರಣೆಯ ಭಾಗವಾಗಿ ಈಗಾಗಲೇ ಗಣಕೀಕೃತ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರಿಂದ ಪರೀಕ್ಷೆ ಮುಗಿದು ಕೆಲವೇ ದಿನಗಳಲ್ಲಿ ಫಲಿತಾಂಶವನ್ನು ಪಡೆಯಲು ಸಹಕಾರಿಯಾಗಿದೆ. ಇದು ಉನ್ನತ ವ್ಯಾಸಂಗ ಮತ್ತು ಉದ್ಯೋಗಕ್ಕೆ ತೆರಳಲು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಸಿಬ್ಬಂದಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.