ADVERTISEMENT

ನಿರ್ಬಂಧ ಸಡಿಲಿಸಿದರೂ ಗರಿಗೆದರಿಲ್ಲ ನಿರ್ಮಾಣ ಚಟುವಟಿಕೆ

ಊರಿಗೆ ಮರಳುತ್ತಿರುವ ಕಾರ್ಮಿಕರ ಮನವೊಲಿಸುವ ಸವಾಲು * ಸಿಮೆಂಟ್‌ ದರ ಏರಿಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2020, 17:28 IST
Last Updated 4 ಮೇ 2020, 17:28 IST
   

ಬೆಂಗಳೂರು: ಕೋವಿಡ್‌– 19 ನಿಯಂತ್ರಣ ಸಲುವಾಗಿ ಹೇರಿದ್ದ ಲಾಕ್‌ಡೌನ್‌ ಅವಧಿ ವಿಸ್ತರಿಸಿದರೂ, ನಿರ್ಮಾಣ ಚಟುವಟಿಕೆಗಳ ಮೇಲಿನ ನಿರ್ಬಂಧವನ್ನು ಸಡಿಲಿಸಲಾಗಿದೆ. ಆದರೂ ನಿರ್ಮಾಣ ಕಾರ್ಯಗಳು ಚುರುಕುಗೊಳ್ಳುವ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ.

ವಲಸೆ ಕಾರ್ಮಿಕರು ತಂಡೋಪತಂಡವಾಗಿ ಊರಿಗೆ ಮರಳುತ್ತಿರುವುದು, ಅಗತ್ಯ ಸಾಮಗ್ರಿಗಳ ಪೂರೈಕೆ ಸರಪಣಿ ವ್ಯತ್ಯಯವಾಗಿರುವುದು, ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆ... ಮುಂತಾದ ಕಾರಣಗಳಿಂದಾಗಿ ನಿರ್ಮಾಣ ಚಟುವಟಿಕೆ ಸಹಜ ಸ್ಥಿತಿಗೆ ಮರಳುವುದಕ್ಕೆ ಇನ್ನೂ ಸಾಕಷ್ಟು ಸಮಯ ಹಿಡಿಯಬಹುದು ಎನ್ನುತ್ತಾರೆ ಬಿಲ್ಡರ್‌ಗಳು.

ವಲಸೆ ಕಾರ್ಮಿಕರು ಊರಿಗೆ ಮರಳುವುದಕ್ಕೆ ಸರ್ಕಾರ ಅವಕಾಶ ಕಲ್ಪಿಸಿದ ಬಳಿಕ ಮೂರು ದಿನಗಳಲ್ಲಿ 50 ಸಾವಿರಕ್ಕೂ ಅಧಿಕ ಕಾರ್ಮಿಕರು ನಗರವನ್ನು ತೊರೆದಿದ್ದಾರೆ. ಇದಕ್ಕಿಂತಲೂ ಹೆಚ್ಚು ಕಾರ್ಮಿಕರು, ‘ಹೇಗಾದರೂ ಮಾಡಿ ಇಲ್ಲಿಂದ ಊರಿಗೆ ಮರಳಿದರೆ ಸಾಕು’ ಎಂಬ ಸ್ಥಿತಿಯಲ್ಲಿದ್ದಾರೆ.

ADVERTISEMENT

‘ನಗರದಲ್ಲಿ ಲಾಕ್‌ಡೌನ್ ಜಾರಿಯಾದ ಬಳಿಕ ಎಲ್ಲ ನಿರ್ಮಾಣ ಚಟುವಟಿಕೆಗಳು ಸ್ತಬ್ದಗೊಂಡಿದ್ದರೂ ಕಾರ್ಮಿಕರ ಊಟೋಪಚಾರಕ್ಕೆ ಹಾಗೂ ಅವರು ಉಳಿದುಕೊಳ್ಳುವುದಕ್ಕೆ ಬಿಲ್ಡರ್‌ಗಳು ಹಾಗೂ ಗುತ್ತಿಗೆದಾರರೇ ವ್ಯವಸ್ಥೆ ಮಾಡಿದ್ದರು. ಈಗ ನಿರ್ಮಾಣ ಚಟುವಟಿಕೆ ಮುಂದುವರಿಸಬಹುದು ಎಂದಿರುವ ಸರ್ಕಾರ, ಇನ್ನೊಂದೆಡೆ ವಲಸೆ ಕಾರ್ಮಿಕರು ಊರಿಗೆ ಮರಳುವುದಕ್ಕೂ ಅವಕಾಶಕೊಟ್ಟಿದೆ. ಇದರಿಂದ ನಿರ್ಮಾಣ ಚಟುವಟಿಕೆ ಹೊಡೆತ ಬೀಳಲಿದೆ’ ಎನ್ನುತ್ತಾರೆ ರಿಯಲ್‌ ಎಸ್ಟೇಟ್‌ ಡೆವಲಪರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ (ಕ್ರೆಡೈ) ಬೆಂಗಳೂರು ಘಟಕದ ಅಧ್ಯಕ್ಷ ಎಸ್‌.ಸುರೇಶ ಹರಿ.

‘ವಲಸೆ ಕಾರ್ಮಿಕರು ಊರಿಗೆ ಮರಳಿದರೂ ಅಲ್ಲಿ ಅವರಿಗೆ ಕೆಲಸ ಸಿಗದು. ಅವರು ಇಲ್ಲೇ ಉಳಿದರೆ ಕೆಲಸವಾದರೂ ಸಿಗುತ್ತಿತ್ತು. ಒಮ್ಮೆ ಊರಿಗೆ ಮರಳಿದವರು ಕೆಲಸಕ್ಕಾಗಿ ಮತ್ತೆ ಇಲ್ಲಿಗೆ ಬರುವ ಸಾಧ್ಯತೆಯೂ ಕಡಿಮೆ. ಹಾಗಾಗಿ ಕೊರೊನಾ ಸೋಂಕಿನ ಭೀತಿ ಆವರಿಸಿರುವವರೆಗೂ ನಿರ್ಮಾಣ ಚಟುವಟಿಕೆ ಮೇಲೆ ಅದರ ಕರಿಛಾಯೆ ಇದ್ದೇ ಇರುತ್ತದೆ’ ಎಂದರು.

‘ಕಾರ್ಮಿಕರನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲು. ನನ್ನ ಬಳಿ ಕೆಲಸಕ್ಕಿದ್ದ 200 ಮಂದಿಯಲ್ಲಿ 50– 60 ಜನ ಉಳಿದುಕೊಂಡಿದ್ದಾರೆ ಅಷ್ಟೇ. ಸೋಂಕು ಹರಡುವ ಭೀತಿಯಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಅವರು ಒಮ್ಮೆ ಊರಿಗೆ ಹೋದರೆ ಸಾಕು ಎನ್ನುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಅವರಿಂದ ಕೆಲಸ ಮಾಡಿಸುವುದಾದರೂ ಹೇಗೆ’ ಎಂದು ಪ್ರಶ್ನಿಸುತ್ತಾರೆ ಅನ್ನಪೂರ್ಣೇಶ್ವರಿ ಎಂಟರ್‌ಪ್ರೈಸಸ್‌ ಮಾಲೀಕರಾದ ಆರ್‌.ಜಿ.ಸೋಮಶೇಖರ ಗೌಡ.

ದರ ಏರಿಕೆ ಬರೆ

ನಿಂತು ಹೋಗಿರುವ ನಿರ್ಮಾಣ ಚಟುವಟಿಕೆಯನ್ನು ಮತ್ತೆ ಶುರು ಮಾಡಲು ಬಿಲ್ಡರ್‌ಗಳು, ಗುತ್ತಿಗೆದಾರರು ಸಿದ್ಧವಾಗಿದ್ದಾರೆ. ಆದರೆ, ಅಗತ್ಯ ಸಾಮಗ್ರಿಗಳ ದರ ಏರಿಕೆ ಅವರನ್ನು ಕಂಗಾಲಾಗಿಸಿದೆ.

‘ಸಿಮೆಂಟ್‌ ದರವನ್ನು ಶೇ 30ರಿಂದ ಶೇ 40ರಷ್ಟು ಹೆಚ್ಚು ಮಾಡಲಾಗಿದೆ. ಬೇಡಿಕೆಯೇ ಇಲ್ಲದ ಸ್ಥಿತಿಯಲ್ಲೂ ಈ ರೀತಿ ದರ ಏರಿಕೆ ಸರಿಯಲ್ಲ. ಇದರಿಂದ ನಿರ್ಮಾಣ ಚಟುವಟಿಕೆ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಸಿಮೆಂಟ್‌ ದರ ಇಳಿಸಲು ಮಧ್ಯಪ್ರವೇಶ ಮಾಡುವಂತೆ ಸರ್ಕಾರವನ್ನು ಕೋರಿದ್ದೇವೆ’ ಎಂದು ಸುರೇಶ ಹರಿ ತಿಳಿಸಿದರು.

‘ಉತ್ತಮ ಗುಣಮಟ್ಟದ ಸಿಮೆಂಟ್‌ ಚೀಲಕ್ಕೆ (50 ಕೆ.ಜಿ)₹ 365– ₹ 380 ದರವಿತ್ತು. ಅದೀಗ ₹ 415 ರಿಂದ ₹430ಕ್ಕೆ ಏರಿಕೆ ಆಗಿದೆ. ಉಳಿದ ಸಾಮಗ್ರಿಗಳೂ ದುಬಾರಿಯಾಗಿವೆ. ಎಂ–ಸ್ಯಾಂಡ್‌ ದರವೂ ಪ್ರತಿ ಟನ್‌ಗೆ₹ 50ರಿಂದ ₹ 100ರಷ್ಟು ಹೆಚ್ಚಾಗಿದೆ. ಜಲ್ಲಿ ದರವೂ ಟನ್‌ಗೆ ₹ 40ರಷ್ಟು ಹೆಚ್ಚಾಗಿದೆ’ ಎಂದು ಗುತ್ತಿಗೆದಾರ ಚೊಕ್ಕನಹಳ್ಳಿ ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

***

ವಲಸೆ ಕಾರ್ಮಿಕರು ಬೆಂಗಳೂರಿನಲ್ಲೇ ಉಳಿದರೆ ಖಂಡಿತಾ ಅವರಿಗೆ ಕೆಲಸ ಸಿಗಲಿದೆ. ಊರಿಗೆ ಮರಳಿದರೆ ಅವರು ಹೆಚ್ಚು ಸಮಸ್ಯೆ ಎದುರಿಸಬೇಕಾಗುತ್ತದೆ. ಕಾರ್ಮಿಕರು ಯಾರೂ ನಗರವನ್ನು ತೊರೆಯಬಾರದು

-ಎಸ್‌.ಸುರೇಶ ಹರಿ, ಕ್ರೆಡೈ ಬೆಂಗಳೂರು ಘಟಕದ ಅಧ್ಯಕ್ಷ

***

ಕಟ್ಟಡ ಸಾಮಗ್ರಿ: ಪೂರೈಕೆ ವ್ಯತ್ಯಯ, ದರ ದುಬಾರಿ

ನಗರದಲ್ಲಿ ಲಾಕ್‌ಡೌನ್‌ ಘೋಷಣೆ ಆದ ಬಳಿಕ ಕಟ್ಟಡ ಸಾಮಗ್ರಿ ಪೂರೈಕೆ ಜಾಲ ವ್ಯತ್ಯಯಗೊಂಡಿದೆ. ಕಟ್ಟಡ ಸಾಮಗ್ರಿಗಳ ಕೊರತೆಯಿಂದಾಗಿಯೂ ಕೆಲಸ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ದಾಸ್ತಾನು ಹೊಂದಿರುವ ಹಾರ್ಡ್‌ವೇರ್‌ ಮಳಿಗೆಗಳು ತಮ್ಮಲ್ಲಿರುವ ಸಾಮಗ್ರಿಗಳಿಗೆ ದುಬಾರಿ ದರ ವಸೂಲಿ ಮಾಡುತ್ತಿವೆ.

‘ಹೊಸ ಕೆಲಸ ಆರಂಭಿಸುವುದು ಬಿಡಿ, ಲಾಕ್‌ಡೌನ್‌ ವೇಳೆ ಅರ್ಧದಲ್ಲೇ ಸ್ಥಗಿತಗೊಂಡಿದ್ದ ಕಟ್ಟಡಗಳ ಕೆಲಸಗಳನ್ನು ಪೂರ್ಣಗೊಳಿಸುವುದೂ ಈಗ ಸವಾಲಿನ ಕೆಲಸ. ಹಾರ್ಡ್‌ವೇರ್‌ ಮಳಿಗೆಗಳು ತೆರೆಯಬಹುದು ಎಂದು ಬಿಬಿಎಂಪಿ ಆದೇಶ ಮಾಡಿತ್ತು. ಆದರೂ, ಸೋಮವಾರ ಅನೇಕ ಕಡೆ ಮಳಿಗೆಗಳು ತೆರೆದಿರಲಿಲ್ಲ. ಕೆಲವು ಅಂಗಡಿಗಳಲ್ಲಿ ಹಾರ್ಡ್‌ವೇರ್‌ ಸಾಮಗ್ರಿಗಳಿಗೆ ದುಬಾರಿ ದರ ವಸೂಲಿಮಾಡಿದ್ದಾರೆ. ಪ್ರಶ್ನಿಸಿದರೆ, ಸಾಮಗ್ರಿಗಳು ಪೂರೈಕೆ ಆಗುತ್ತಿಲ್ಲ. ಬೇಕಿದ್ದರೆ ತೆಗೆದುಕೊಂಡು ಹೋಗಿ ಎಂದು ದರ್ಪದಿಂದ ಹೇಳುತ್ತಾರೆ’ ಎಂದು ದೂರುತ್ತಾರೆ ಸೋಮಶೇಖರ ಗೌಡ.

‘ಪ್ಲೈವುಡ್‌, ಪೇಂಟ್‌, ಎಲ್ಲವೂ ದುಬಾರಿಯಾಗುತ್ತಿದೆ. ಮೊದಲೇ ಕೈಯಲ್ಲಿ ಕಾಸಿಲ್ಲ. ಕೆಲಸ ಮುಂದುವರಿಸುವುದು ಹೇಗೆ ಎಂಬುದೇ ಚಿಂತೆ’ ಎನ್ನುತ್ತಾರೆ ನಂದಿನಿ ಬಡಾವಣೆಯ ಕಾರ್ಪೆಂಟರ್‌ ಭಾಸ್ಕರ್‌.

***

ಪಾವತಿ ಸ್ಥಗಿತ– ಹಣಕಾಸಿನ ಮುಗ್ಗಟ್ಟು

‘ನಾವು ಈಗಾಗಲೇ ಮುಗಿಸಿರುವ ಕೆಲಸಗಳ ಪಾವತಿಯೂ ಸ್ಥಗಿತಗೊಂಡಿದೆ. ಕಟ್ಟಡ ನಿರ್ಮಿಸುತ್ತಿದ್ದವರೂ ದುಡ್ಡಿಲ್ಲ ಎಂದು ಕೈ ಚೆಲ್ಲುತ್ತಿದ್ದಾರೆ. ಬ್ಯಾಂಕ್‌ಗಳಲ್ಲಿ ಸಾಲ ಪಡೆಯವುದೂ ಕಷ್ಟ. ಕೈಯಲ್ಲಿ ಕಾಸಿದ್ದರೆ ಮಾತ್ರ ನಿರ್ಮಾಣ ಚಟುವಟಿಕೆ ಮುಂದುವರಿಸಲು ಸಾಧ್ಯ. ಹಾಗಾಗಿ ನಮ್ಮ ಭವಿಷ್ಯ ಚಿಂತಾಜನಕವಾಗಿದೆ’ ಎಂದು ಗುತ್ತಿಗೆದಾರ ರಮೇಶ್‌ ಆತಂಕ ತೋಡಿಕೊಂಡರು.

***

ಅಂಕಿ ಅಂಶ

1,41,179

ನಗರದಲ್ಲಿದ್ದ ವಲಸೆ ಕಾರ್ಮಿಕರು

68,000

ಕ್ರೆಡೈ ಆರೈಕೆಯಲ್ಲಿದ್ದ ವಲಸೆ ಕಾರ್ಮಿಕರು

3,750

ಕಟ್ಟಡ ನಿರ್ಮಾಣ ತಾಣಗಳಲ್ಲಿ ವಲಸೆ ಕಾರ್ಮಿಕರು ಉಳಿದುಕೊಂಡಿದ್ದರು


ಆಕರ: ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.