ಪುರುಷೋತ್ತಮ ಬಿಳಿಮಲೆ
ಬೆಂಗಳೂರು: 2011ರ ಜನಗಣತಿ ಪ್ರಕಾರ ದೇಶದಲ್ಲಿರುವ ಮಾತೃಭಾಷೆಗಳ ಸಂಖ್ಯೆ 19,569. ಇವುಗಳ ಉಳಿವಿಗೆ ಎಲ್ಲರೂ ಕೆಲಸ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
ನಗರದಲ್ಲಿ ಶನಿವಾರ ರಾಜ್ಯ ಒಕ್ಕಲಿಗರ ಒಕ್ಕೂಟ ಟ್ರಸ್ಟ್ ಆಯೋಜಿಸಿದ್ದ ರಾಜ್ಯಮಟ್ಟದ ಜಾನಪದ ಸಂಭ್ರಮ, ಸಾಧಕರಿಗೆ ಸನ್ಮಾನ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆಯ ಉಳಿವಿಗಾಗಿ ಕನ್ನಡ ಪ್ರಾಧಿಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಬಲಿಷ್ಠ ನಾಡು ಕಟ್ಟಬೇಕಾದರೆ ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆ ಉಳಿಸಬೇಕು. ವಿವಿಧ ಸಂಸ್ಕೃತಿ, ಭಾಷೆ ಮತ್ತು ಆಚರಣೆ ಹೊಂದಿರುವ ಭಾರತವನ್ನು ಹಾಳು ಮಾಡಲು ಬಿಡಬಾರದು ಎಂದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮಾತನಾಡಿ, ‘ಹೆಣ್ಣು ಮಕ್ಕಳು ಸವಾಲು, ಅಡಚಣೆ, ಅವಮಾನವನ್ನು ಧೈರ್ಯದಿಂದ ಎದುರಿಸಬೇಕು. ಸಾಧ್ಯವಾದಷ್ಟು ಮೊಬೈಲ್‌ನಿಂದ ದೂರವಿರಿ. ಜಾಲತಾಣದಲ್ಲಿ ಅಪರಿಚಿತರಿಗೆ ಫೋಟೊ, ವಿಡಿಯೊ ಕಳುಹಿಸಬಾರದು. ಒಂದು ವೇಳೆ ಯಾವುದಾದರೂ ತೊಂದರೆಗೆ ಸಿಲುಕಿದರೆ ಮೊದಲು ಪೋಷಕರು ಮತ್ತು ಪೊಲೀಸರಿಗೆ ತಿಳಿಸಬೇಕು. ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿದರೆ, 10 ನಿಮಿಷದಲ್ಲಿ ಪೊಲೀಸರು ಬರುತ್ತಾರೆ ಎಂದು ನುಡಿದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಸಾಧನೆ ಮಾಡಲು ಸಾಕಷ್ಟು ಅವಕಾಶ ಇದೆ. ಎಂಜಿನಿಯರ್, ವೈದ್ಯರಾರಾಗಬೇಕೆಂದು ಪೋಷಕರು ಮಕ್ಕಳ ಮೇಲೆ ಒತ್ತಡ ಹೇರಬಾರದು. ಅವರ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಿ, ಪ‍್ರೋತ್ಸಾಹಿಸಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು. ಸೃಷ್ಟಿ ಕಲಾ ವಿದ್ಯಾಲಯ ತಂಡದವರು ಜಾನಪದ ನೃತ್ಯ ಪ್ರದರ್ಶಿಸಿದರು.
ರಾಜ್ಯ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಸಿ.ವಿ.ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೇಖಕ ಮನು ಬಳಿಗಾರ್ ಅಧ್ಯಕ್ಷತೆವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ ಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಕಿರಣ್ ಗೌಡ, ರೋಲ್ಸ್ ರಾಯ್ಸ್ ಕಂಪನಿ ಉದ್ಯೋಗಿ ಕೆ.ಎಸ್.ರಿತುಪರ್ಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.