ADVERTISEMENT

ಓಂ ಪ್ರಕಾಶ್‌ ಕೊಲೆ | ಪತ್ನಿ ಕೃತ್ಯ ಸಾಬೀತು: ದೋಷಾರೋಪ ಪಟ್ಟಿ ಸಲ್ಲಿಸಿದ ಸಿಸಿಬಿ

ಆದಿತ್ಯ ಕೆ.ಎ
Published 13 ಆಗಸ್ಟ್ 2025, 22:59 IST
Last Updated 13 ಆಗಸ್ಟ್ 2025, 22:59 IST
ಓ ಪ್ರಕಾಶ್‌ 
ಓ ಪ್ರಕಾಶ್‌    

ಬೆಂಗಳೂರು: ರಾಜ್ಯದ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ (ಡಿಜಿ ಮತ್ತು ಐಜಿಪಿ) ಓಂ ಪ್ರಕಾಶ್‌ (68) ಅವರ ಕೊಲೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಸಿಬಿ ಪೊಲೀಸರು, ನ್ಯಾಯಾಲಯಕ್ಕೆ 1,150 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅವರ ಪತ್ನಿ ಪಲ್ಲವಿ ಪ್ರಕರಣದ ಪ್ರಮುಖ ಆರೋಪಿ ಎಂದು ಉಲ್ಲೇಖಿಸಲಾಗಿದೆ.

ಏಪ್ರಿಲ್‌ 20ರಂದು ಓಂ ಪ್ರಕಾಶ್ ಅವರ ಕೊಲೆ ನಡೆದಿತ್ತು. ಕೊಲೆ ಪ್ರಕರಣದ ಆರೋಪದಡಿ ಪಲ್ಲವಿ (ಮೊದಲ ಆರೋಪಿ) ಹಾಗೂ ಅವರ ಪುತ್ರಿ ಕೃತಿಕಾ (ಎರಡನೇ ಆರೋಪಿ) ವಿರುದ್ಧ ಎಚ್‌ಎಸ್‌ಆರ್‌ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಏಪ್ರಿಲ್‌ 21ರಂದು ಪಲ್ಲವಿ ಅವರನ್ನು ಪೊಲೀಸರು ಬಂಧಿಸಿದ್ದರು. ಓಂ ಪ್ರಕಾಶ್‌ ಅವರ ಪುತ್ರ ಕಾರ್ತಿಕೇಶ್‌ ಅವರು ದೂರು ನೀಡಿದ್ದರು.

‘ತಂದೆ ಓಂ ಪ್ರಕಾಶ್‌ ಅವರಿಗೆ ತಾಯಿ ಪಲ್ಲವಿ ಕೊಲೆ ಬೆದರಿಕೆ ಹಾಕುತ್ತಿದ್ದರು. ಹೆದರಿದ್ದ ತಂದೆ, ಅವರ ಸಹೋದರಿ ಸರಿತಾ ಕುಮಾರಿ ಅವರ ಮನೆಯಲ್ಲಿ ವಾಸ ಇದ್ದರು. ನನ್ನ ತಂಗಿ ಕೃತಿ ಹೋಗಿ ಮರಳಿ ಮನೆಗೆ ಬರುವಂತೆ ಪೀಡಿಸಿ ಕರೆದುಕೊಂಡು ಬಂದಿದ್ದರು. ಮನೆಗೆ ಬಂದ ಮೇಲೆ ತಂದೆಯನ್ನು ಕೊಲೆ ಮಾಡಲಾಗಿದೆ’ ಎಂದು ಕಾರ್ತಿಕೇಶ್‌ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ADVERTISEMENT

ನಂತರ, ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಹಿಂದಿನ ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ಅವರು ಆದೇಶಿಸಿದ್ದರು. ತನಿಖೆ ಪೂರ್ಣಗೊಳಿಸಿರುವ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಡಿಜಿಟಲ್‌ ಸಾಕ್ಷ್ಯಾಧಾರ ಒಳಗೊಂಡಂತೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.

‘ಕೊಲೆ ಪ್ರಕರಣದಲ್ಲಿ ಪುತ್ರಿಯ ಪಾತ್ರ ಕಂಡುಬಂದಿಲ್ಲ. ಆಕೆಯ ಹೆಸರನ್ನು ದೋಷಾರೋಪ ಪಟ್ಟಿಯಿಂದ ಕೈಬಿಟ್ಟು ಆರೋಪ ಮುಕ್ತಗೊಳಿಸಲಾಗಿದೆ. ಪಲ್ಲವಿ ಅವರೇ ಕೃತ್ಯ ಎಸಗಿರುವುದು ತನಿಖೆಯಿಂದ ಸಾಬೀತಾಗಿದ್ದು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊಲೆ ಪಿತೂರಿಯಲ್ಲಿ ಕೃತಿ ಅವರ ಪಾತ್ರವಿದೆ ಎಂದು ಹೇಳಲು ಸಾಕಷ್ಟು ಪುರಾವೆಗಳಿಲ್ಲ. ಕೃತ್ಯ ನಡೆದಾಗ ಕೃತಿ ಅವರು ಮನೆಯ ಮಹಡಿಯಲ್ಲಿ ಇದ್ದರು. ಕಿರುಚಾಟ ಕೇಳಿಸಿಕೊಂಡು ಕೃತ್ಯ ನಡೆದಿದ್ದ ಸ್ಥಳಕ್ಕೆ ಬಂದಿದ್ದರು. ನಂತರ ತಾಯಿ ಜತೆಗೆ ಮೊದಲ ಮಹಡಿಗೆ ತೆರಳಿದ್ದರು’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಆಸ್ತಿ ವಿವಾದವೇ ಕಾರಣ: ‘1981ನೇ ಬ್ಯಾಚ್‌ನ ನಿವೃತ್ತ ಐಪಿಎಸ್ ಅಧಿಕಾರಿ ಓಂ ಪ್ರಕಾಶ್ ಅವರನ್ನು ನಗರದ ಎಚ್‌ಎಸ್‌ಆರ್ ಲೇಔಟ್ ನಿವಾಸದಲ್ಲಿ ಪಲ್ಲವಿ ಕೊಲೆ ಮಾಡಿದ್ದರು. ಪಲ್ಲವಿ ಹಾಗೂ ಓಂ ಪ್ರಕಾಶ್‌ ನಡುವೆ ಆಸ್ತಿಗೆ ಸಂಬಂಧಿಸಿದಂತೆ ಪ್ರತಿನಿತ್ಯ ಗಲಾಟೆ ನಡೆಯುತ್ತಿತ್ತು. ಓಂ ಪ್ರಕಾಶ್ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅದೇ ಜಿಲ್ಲೆಯ ವಿವಿಧೆಡೆ ಜಮೀನು ಖರೀದಿಸಿದ್ದರು. ಅದರಲ್ಲಿ ಸ್ವಲ್ಪ ಭಾಗವನ್ನು ಸಹೋದರಿ ಹೆಸರಿಗೆ ನೋಂದಣಿ ಮಾಡಲು ಬಯಸಿದ್ದರು. ಅದು ಪಲ್ಲವಿ ಅವರಿಗೆ ಕೋಪ ತರಿಸಿತ್ತು. ಆಸ್ತಿ ವಿವಾದವೇ ಕೊಲೆಗೆ ಪ್ರಮುಖ ಕಾರಣವಾಗಿದೆ ಎಂಬುದು ತನಿಖೆಯಿಂದ ಕಂಡುಬಂದಿದೆ. ಬೇರೆ ಯಾವುದೇ ಕಾರಣಗಳು ಸಾಬೀತಾಗಿಲ್ಲ’ ಎಂದು ಮೂಲಗಳು ತಿಳಿಸಿವೆ.

ಪಲ್ಲವಿ ಅವರು ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ವಿವರವಾದ ತನಿಖೆಯ ಬಳಿಕ ಸಿಸಿಬಿ ಅಧಿಕಾರಿಗಳು ಪಲ್ಲವಿ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.

ಪಲ್ಲವಿ ಹಾಗೂ ಓಂ ಪ್ರಕಾಶ್‌ 
ಹೇಗೆ ನಡೆದಿತ್ತು ಕೊಲೆ?
ಏಪ್ರಿಲ್‌ 20ರಂದು ಮಧ್ಯಾಹ್ನ ಓಂ ಪ್ರಕಾಶ್ ಅವರು ಊಟ ಮಾಡುತ್ತಿದ್ದರು. ಹೋಟೆಲ್‌ನಿಂದ ಮೀನು ಫ್ರೈ ತರಿಸಿಕೊಂಡಿದ್ದರು. ಅದೇ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ಹತ್ಯೆ ಮಾಡಲಾಗಿತ್ತು. ಚಾಕು ಹಾಗೂ ಸ್ಕ್ರೂಡ್ರೈವರ್‌ನಿಂದ ಇರಿತಕ್ಕೆ ಒಳಗಾದ ಓಂ ಪ್ರಕಾಶ್ ಅವರು 15 ನಿಮಿಷ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದರು. ಪತಿ ಮೃತಪಟ್ಟಿರುವುದನ್ನು ಖಚಿತ ಪಡಿಸಿಕೊಂಡಿದ್ದ ಪಲ್ಲವಿ ಮೂರನೇ ಮಹಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದರು. ಅಲ್ಲದೇ ಓಂ ಪ್ರಕಾಶ್ ಅವರ ಮೇಲೆ ಖಾರದಪುಡಿ ಎರಚಿ ಬಳಿಕ ಅಡುಗೆ ಎಣ್ಣೆಯನ್ನೂ ಸುರಿಯಲಾಗಿತ್ತು. ಕೈ–ಕಾಲು ಕಟ್ಟಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ದೇಹದ 10 ಕಡೆ ಇರಿದ ಗುರುತುಗಳು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆ ಆಗಿದ್ದವು ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.