(ಸಾಂದರ್ಭಿಕ ಚಿತ್ರ)
ಬೆಂಗಳೂರು: ಯುವತಿಯ ವಿಚಾರಕ್ಕೆ ಹಾಲಿ ಪ್ರಿಯಕರನಿಗೆ ಮಾಜಿ ಪ್ರಿಯಕರ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಿಲಕನಗರ ಠಾಣೆ ವ್ಯಾಪ್ತಿಯ ನಕಲು ಬಂಡೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ನಕಲುಬಂಡೆ ನಿವಾಸಿ ಕಿರಣ್(21) ಕೊಲೆಯಾದ ಯುವಕ.
ಕೃತ್ಯ ಎಸಗಿದ ಆರೋಪದ ಅಡಿ ಬೈರಸಂದ್ರ ನಿವಾಸಿ, ಮಾಜಿ ಪ್ರಿಯಕರ ಜೀವನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು
‘ನಕಲು ಬಂಡೆಯ ಜಯನಗರ ಮೂರನೇ ಬ್ಲಾಕ್‌ನಲ್ಲಿ ಆರೋಪಿ ಜೀವನ್, ಕಿರಣ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ’ ಎಂದು ಪೊಲೀಸರು ತಿಳಿಸಿದರು.
‘ಕನಕಪುರ ಮೂಲದ ಕಿರಣ್ ಅವರು ತನ್ನ ಪೋಷಕರ ಜತೆಗೆ ನಕಲು ಬಂಡೆಯಲ್ಲಿ ವಾಸವಾಗಿದ್ದರು. ಆನ್‌ಲೈನ್ ವಹಿವಾಟಿನ ಬ್ಲಿಂಕ್ಇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಆರೋಪಿ ಜೀವನ್ ವಾಹನ ಶೋ ರೂಮ್‌ನಲ್ಲಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಜಯನಗರದಲ್ಲಿ ಕಾಸ್ಮಿಟಿಕ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರ ನಡುವೆ ಜಗಳವಾಗಿ, ಆರು ತಿಂಗಳಿಂದ ದೂರವಾಗಿದ್ದರು. ಬಳಿಕ ತನ್ನ ಮನೆ ಸಮೀಪದಲ್ಲಿರುವ ಕಿರಣ್ ಅವರನ್ನು ಆಕೆ ಪ್ರೀತಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಇಬ್ಬರೂ ತಮ್ಮ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಪ್ರೀತಿ ವಿಚಾರವನ್ನು ಪೋಸ್ಟ್ ಮಾಡಿಕೊಂಡಿದ್ದರು. ಅದನ್ನು ಗಮನಿಸಿದ್ದ ಜೀವನ್, ಬುಧವಾರ ಸಂಜೆ ಯುವತಿಗೆ ಕರೆ ಮಾಡಿ ನಾನು ಕೊಟ್ಟಿರುವ ಗಿಫ್ಟ್‌ಗಳನ್ನು ವಾಪಸ್ ಕೊಡುವಂತೆ ಕೇಳಿದ್ದ. ಈ ವಿಚಾರವನ್ನು ಯುವತಿ ಪ್ರಿಯಕರ ಕಿರಣ್ ಅವರಿಗೆ ತಿಳಿಸಿದ್ದರು. ಗಿಫ್ಟ್‌ಗಳನ್ನು ವಾಪಸ್ ಕೊಡಲು ಇಬ್ಬರೂ ಒಟ್ಟಿಗೆ ಹೋಗಿದ್ದರು’ ಎಂದು ಪೊಲೀಸರು ಹೇಳಿದರು.
‘ಜೀವನ್ ತನಗೆ ನೀಡಿದ್ದ ಸ್ವೀಕರ್(ಮನೆಯಲ್ಲಿ ಬಳಸುವ)ಅನ್ನು ವಾಪಸ್ ಕೊಡಲು ಪ್ರಿಯಕರ ಕಿರಣ್ ಜತೆ ನಕಲು ಬಂಡೆಯ ‘ಪ್ರೀತಿ ಲೇಡಿಸ್ ಪಿ.ಜಿ’ ಬಳಿ ಯುವತಿ ಹೋಗಿದ್ದರು. ಅಲ್ಲಿ ಜೀವನ್ ಹಾಗೂ ಯುವತಿ ನಡುವೆ ಗಲಾಟೆ ಆಗಿತ್ತು. ಸ್ಥಳೀಯರು ಸಮಾಧಾನ ಪಡಿಸಿ ಇಬ್ಬರನ್ನು ಕಳುಹಿಸಿದ್ದರು. ಆದರೆ, ಜೀವನ್ ಕೋಪದಿಂದ ತನ್ನ ಬಳಿಯಿದ್ದ ಚಾಕುವಿನಿಂದ ಕಿರಣ್ ಅವರ ಎದೆಗೆ ಇರಿದು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.