ADVERTISEMENT

ಮುಂದಿನ ವರ್ಷ ಹೆಚ್ಚು ಆದಾಯ ಸಂಗ್ರಹಿಸುವ ನಿರೀಕ್ಷೆ: ಅಬಕಾರಿ ಸಚಿವ ಕೆ.ಗೋಪಾಲಯ್ಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 15:17 IST
Last Updated 9 ಫೆಬ್ರುವರಿ 2021, 15:17 IST
ಅಬಕಾರಿ ಸಚಿವ ಕೆ. ಗೋಪಾಲಯ್ಯ
ಅಬಕಾರಿ ಸಚಿವ ಕೆ. ಗೋಪಾಲಯ್ಯ    

ಬೆಂಗಳೂರು: ಅಬಕಾರಿ ಇಲಾಖೆ ಮುಂಬರುವ ಆರ್ಥಿಕ ವರ್ಷದಲ್ಲಿ ಹೆಚ್ಚು ಆದಾಯ ಸಂಗ್ರಹಕ್ಕೆ ಗುರಿ ನಿಗದಿ ಮಾಡಲಾಗುವುದು ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ.

ಈ ವರ್ಷ ₹22,700 ಕೋಟಿ ನಿಗದಿ ಮಾಡಲಾಗಿತ್ತು. ಈವರೆಗೆ ₹19,433 ಕೋಟಿ ಸಂಗ್ರಹವಾಗಿದ್ದು. ಇನ್ನು ಉಳಿದಿರುವ ಮೊತ್ತವನ್ನು ಬಜೆಟ್‌ ಒಳಗೆ ಸಂಗ್ರಹಿಸಲಾಗುವುದು ಎಂಬುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಜೆಟ್‌ ಪೂರ್ವಭಾವಿ ಸಭೆಯ ಹಿನ್ನೆಲೆಯಲ್ಲಿ ಗೋಪಾಲಯ್ಯ ಅವರು ಮದ್ಯ ಮಾರಾಟಗಾರರ ಸಭೆಯನ್ನು ಮಂಗಳವಾರ ವಿಧಾನಸೌಧದಲ್ಲಿ ನಡೆಸಿದರು. ಸಭೆಯ ಬಳಿಕ ಸುದ್ದಗಾರರ ಜತೆ ಮಾತನಾಡಿ, ಅಬಕಾರಿ ರಾಜಸ್ವ ಸಂಗ್ರಹದಲ್ಲಿ ಹಿಂದಿನ ಸಾಲಿಗಿಂತ ಈ ಸಾಲಿನಲ್ಲಿ ಶೇ 4.4 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

ADVERTISEMENT

ಇಂದಿನ ಸಭೆಯಲ್ಲಿ ಮದ್ಯ ಮಾರಾಟಗಾರರು ಹಲವು ಬೇಡಿಕೆಗಳು ಮತ್ತು ಸಮಸ್ಯೆಗಳ ಬಗ್ಗೆ ಮಾತನಾಡಿದರು. ಮುಖ್ಯವಾಗಿ ಕಮಿಷನ್‌ ಅನ್ನು ಶೇ 20 ರಿಂದ ಶೇ 25 ಕ್ಕೆ ಏರಿಸಬೇಕು ಎಂದು ಹೇಳಿದ್ದಾರೆ. ಇವೆಲ್ಲವನ್ನೂ ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

ಅಬಕಾರಿ ಆದಾಯ ಸಂಗ್ರಹದಲ್ಲಿ ಆಗುತ್ತಿರುವ ಸೋರಿಕೆ ಮತ್ತು ಅಕ್ರಮಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಇದಕ್ಕಾಗಿ ಅಬಕಾರಿ ಉಪನಿರೀಕ್ಷಕರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ತೀರ್ಮಾನಿಸಿದ್ದು. ಒಟ್ಟು 350 ದ್ವಿಚಕ್ರ ವಾಹನ ಖರೀದಿಸಲಾಗುವುದು ಎಂದು ಗೋಪಾಲಯ್ಯ ತಿಳಿಸಿದರು.

ಜಿಲ್ಲಾ ಅಬಕಾರಿ ಕಚೇರಿಗಳಿಗೆ ತಲಾ ನಾಲ್ಕು ಪಿಸ್ತೂಲ್‌ಗಳನ್ನು ನೀಡಲು ತೀರ್ಮಾನಿಸಲಾಗಿದೆ. ಹೊಸದಾಗಿ ಮದ್ಯ ಮಾರಾಟಕ್ಕೆ ಲೈಸೆನ್ಸ್‌ಗಳನ್ನು ನೀಡುವುದಿಲ್ಲ. ಅದೇ ರೀತಿ ಆನ್‌ಲೈನ್‌ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.