ADVERTISEMENT

ಗ್ರೆನೇಡ್ ಮಾದರಿಯ ವಸ್ತು ಇಟ್ಟುಕೊಂಡಿದ್ದ ಪ್ರಕರಣ: ಆರೋಪಿಯ ತೀವ್ರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 23:30 IST
Last Updated 22 ಮಾರ್ಚ್ 2025, 23:30 IST
   

ಬೆಂಗಳೂರು: ಬ್ಯಾಗ್‌ನಲ್ಲಿ ಗ್ರೆನೇಡ್ ಮಾದರಿಯ ವಸ್ತು ಇಟ್ಟುಕೊಂಡಿದ್ದ ಹೋಟೆಲ್ ಸಿಬ್ಬಂದಿ ಅಬ್ದುಲ್ ರೆಹಮಾನ್ ಅವರನ್ನು ಕೇಂದ್ರ ತನಿಖಾ ಸಂಸ್ಥೆಗಳು ವಿಚಾರಣೆಗೆ ಒಳಪಡಿಸಿವೆ.

ಗ್ರೆನೇಡ್ ಮಾದರಿಯ ವಸ್ತು ಪತ್ತೆಯಾದ ಬೆನ್ನಲ್ಲೇ ರಾಜ್ಯ ಮತ್ತು ಕೇಂದ್ರ ಗುಪ್ತಚರ, ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಸಂಪಿಗೆಹಳ್ಳಿ ಪೊಲೀಸರ ವಶದಲ್ಲಿರುವ ಆರೋಪಿ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಗ್ರೆನೇಡ್ ಮಾದರಿಯ ವಸ್ತು ಎಲ್ಲಿ ಸಿಕ್ಕಿದೆ? ಎಷ್ಟು ದಿನಗಳಿಂದ ಇಟ್ಟುಕೊಂಡಿದ್ದಿಯಾ? ಬಾಲ್ ಮಾದರಿಯಲ್ಲಿರುವ ಇದಕ್ಕೆ ರಾಸಾಯನಿಕ ವಸ್ತು ತುಂಬಿದವರು ಯಾರು? ಅದಕ್ಕೆ ಬತ್ತಿ ಜೋಡಿಸಿದವರು ಯಾರು? ಸೇರಿದಂತೆ ಹಲವು ಪ್ರಶ್ನೆಗಳನ್ನು ಆರೋಪಿಗೆ ಕೇಳಲಾಗಿದೆ.

ADVERTISEMENT

‘ಚಿಂದಿ ಆಯುವ ವೇಳೆ ಸ್ಪೋಟಕ ಸಿಕ್ಕಿದ್ದು, ಅದನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದೆ. ಅದು ಅಪಾಯಕಾರಿ ಎಂಬುದು ಗೊತ್ತಿರಲಿಲ್ಲ’ ಎಂದು ವಿಚಾರಣೆ ವೇಲೆ ಹೇಳಿದ್ದಾನೆ. ಈತನ ಬ್ಯಾಂಕ್ ಖಾತೆಗಳ ಮಾಹಿತಿ ಪರಿಶೀಲಿಸಲಾಗುತ್ತಿದೆ. ಯಾವ ಸ್ಪೋಟಕ? ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ? ಎಲ್ಲಿ ತಯಾರಾಗಿದೆ? ಎಲ್ಲಿ ಬಳಸಲಾಗುತ್ತದೆ ಎಂಬುದು ಎಫ್ಎಸ್‌ಎಲ್ ವರದಿ ಬಳಿಕ ಸ್ಪಷ್ಟತೆ ಸಿಗಲಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

‘ಕೋಗಿಲು ಮುಖ್ಯರಸ್ತೆಯ ಬೆಳ್ಳಹಳ್ಳಿ ನಿವಾಸಿ ಅಬ್ದುಲ್‌, ಮೊದಲು ಬೆಳ್ಳಹಳ್ಳಿಯಲ್ಲಿ ಪರಿಚಿತರೊಬ್ಬರ ಬಳಿ ಕಾರ್ಪೆಂಟರ್‌ ಕೆಲಸ ಮಾಡುತ್ತಿದ್ದ. ಬಳಿಕ ಕೆಲಸ ಬಿಟ್ಟು, ಚಿಂದಿ ಆಯುತ್ತಿದ್ದ. ತಾಯಿ ಮತ್ತು ಮಲ ತಂದೆ ಜತೆ ವಾಸವಾಗಿದ್ದ. ನಾಲ್ಕೈದು ತಿಂಗಳ ಹಿಂದೆ ಪೋಷಕರ ಜತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೊರ ಬಂದಿದ್ದಾನೆ. ನಂತರ ಯಾವುದೇ ಉದ್ಯೋಗ ಸಿಗದ ಕಾರಣ ಚಿಂದಿ ಆಯುವ ಕೆಲಸ ಮಾಡುತ್ತಿದ್ದ’ ಎಂದು ಮೂಲಗಳು ಹೇಳಿವೆ.

ನಾಲ್ಕು ದಿನದ ಹಿಂದೆ ನೇಮಕ
ನಾಲ್ಕು ದಿನಗಳ ಹಿಂದೆ ಅಬ್ದುಲ್ ಕೆಲಸ ಕೇಳಿಕೊಂಡು ಥಣಿಸಂದ್ರದ ಮುಖ್ಯರಸ್ತೆಯ ಶ್ರೀದೇವಿ ವೈಭವ್‌ ಹೋಟೆಲ್‌ಗೆ ಬಂದಿದ್ದ. ಕೆಲಸ ನೀಡಿದ್ದ ಹೋಟೆಲ್ ಮಾಲೀಕರು ಉಳಿದುಕೊಳ್ಳಲು ಸಣ್ಣ ಕೊಠಡಿ ನೀಡಿದ್ದರು. ಆಧಾರ್‌ ಕಾರ್ಡ್ ನೀಡುವಂತೆ ಕೇಳಿದರೂ ಅಬ್ದುಲ್ ಕೊಟ್ಟಿರಲಿಲ್ಲ. ಆತನ ಕೊಠಡಿಯನ್ನು ಆಧಾರ್ ಕಾರ್ಡ್‌ಗಾಗಿ ಪರಿಶೀಲಿಸಿದಾಗ ಸ್ಫೋಟಕ ವಸ್ತು ಸಿಕ್ಕಿತ್ತು. ಪಿಎಸ್‌ಐ ಕುಪೇಂದ್ರ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.