ಬಂಧನ
ಬೆಂಗಳೂರು: ಸ್ನೇಹಿತನನ್ನು ಊಟಕ್ಕೆ ಕರೆದೊಯ್ದು ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಜಾಲದ ಅಚಲ್ ನಾನಾ (21), ಪವನ್ ಭಾಸ್ಕರ್(21), ಆತನ ಸ್ನೇಹಿತರಾದ ಪ್ರೇಮ್(21), ತರುಣ್ (19) ಬಂಧಿತರು.
ಆರೋಪಿಗಳಿಂದ 93 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಕಾರು ಮತ್ತು ಚಾಕು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.
ದಾರಿ ಮಧ್ಯೆ ಚಂದನ್ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು 40 ಗ್ರಾಂ ಉಂಗುರ, ಕೈಯಲ್ಲಿದ್ದ 20 ಗ್ರಾಂ ಚಿನ್ನದ ಕಡಗ ಮತ್ತು 9 ಗ್ರಾಂ ತೂಕದ ಚಿನ್ನದ ಸರ ಕಸಿದುಕೊಂಡು ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ಅಚಲ್ ನಾನಾ ಚಿಕ್ಕಜಾಲದಲ್ಲಿ ಕಾಫಿ ಕೆಫೆ ಇಟ್ಟುಕೊಂಡಿದ್ದಾನೆ. ಆತನ ಸ್ನೇಹಿತರಾದ ಪ್ರೇಮ್, ತರುಣ್, ಪವನ್ ಬೇರೆ ಸ್ಥಳಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ದೂರುದಾರ ಚಂದನ್ ಅವರು ಉದ್ಯಮ ನಡೆಸುತ್ತಿದ್ದಾರೆ.
ಮೇ 7ರಂದು ಅಚಲ್ ನಾನಾ ಎಂಬಾತ ಚಂದನ್‌ಗೆ ಕರೆ ಮಾಡಿ, ಪಾರ್ಟಿಗೆ ಹೋಗೋಣ ಎಂದು ಕರೆದಿದ್ದ. ಅದಕ್ಕೆ ಒಪ್ಪಿದ್ದ ಚಂದನ್, ಆರೋಪಿಗಳು ಹೇಳಿದ್ದ ಸ್ಥಳಕ್ಕೆ ಹೋಗಿದ್ದರು. ಅಲ್ಲಿಂದ ವಿಮಾನ ನಿಲ್ದಾಣ ಸಮೀಪದ ಹೋಟೆಲ್‌ವೊಂದಕ್ಕೆ ಕರೆದೊಯ್ದು ತಡರಾತ್ರಿ ವರೆಗೂ ಪಾರ್ಟಿ ಮಾಡಿದ್ದರು. ನಂತರ, ವಾಪಸ್ ಬರುವಾಗ ಕಾರಿಗೆ ಯಾರೊ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ ಎಂದು ಕಾರು ನಿಲುಗಡೆ ಮಾಡಿದ್ದರು. ಆ ಬಳಿಕ ಬೈಕ್‌ನಲ್ಲಿ ಬಂದು ಇಬ್ಬರು ಆರೋಪಿಗಳು ಚಂದನ್ ಮೇಲೆ ಹಲ್ಲೆ ನಡೆಸಿ, ಸುಲಿಗೆ ಮಾಡಿದ್ದರು. ಸುಲಿಗೆಕೋರರನ್ನು ಕಾರಿನಲ್ಲಿದ್ದ ಇಬ್ಬರು ಹಿಡಿಯುವ ಪ್ರಯತ್ನ ಮಾಡಿರಲಿಲ್ಲ. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡದಂತೆ ಆರೋಪಿಗಳು ಸೂಚಿಸಿದ್ದರು.
ಮನೆಯವರ ಸಲಹೆ ಮೇರೆಗೆ ಚಂದನ್ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
‘ಆರೋಪಿಗಳ ಪೈಕಿ ಪವನ್ ವಿರುದ್ಧ ನಗರದ ಕೆಲವು ಠಾಣೆಗಳಲ್ಲಿ ಹಲ್ಲೆ ಪ್ರಕರಣಗಳು ದಾಖಲಾಗಿವೆ. ಈತ ಸಂಪಾದಿಸುತ್ತಿದ್ದ ಹಣದಿಂದ ಜೀವನ ನಿರ್ವಹಣೆ ಕಷ್ಟವಾಗಿತ್ತು. ಅಚಲ್ ನಾನಾ ಕೂಡ ಬಹಳಷ್ಟು ಸಾಲ ಮಾಡಿಕೊಂಡು, ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ. ಹೀಗಾಗಿ ಚಂದನ್ ಬಳಿಯಿದ್ದ ಚಿನ್ನಾಭರಣ ಸುಲಿಗೆ ಮಾಡಿ, ಸಾಲ ತೀರಿಸಬಹುದು ಎಂದು ಇಬ್ಬರು ಸಂಚು ರೂಪಿಸಿ, ತನ್ನ ಸ್ನೇಹಿತರಿಗೆ ಸುಪಾರಿ ನೀಡಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.