ಬೆಂಗಳೂರು: ಡಿಜಿಟಲ್ ಸಾಧನಗಳ ಅತಿಯಾದ ಬಳಕೆ ಸೇರಿ ವಿವಿಧ ಕಾರಣಗಳಿಂದ ದೃಷ್ಟಿದೋಷ ಸಮಸ್ಯೆಗೆ ಒಳಪಡುವ ಮಕ್ಕಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆಯ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ (ಆರ್‌ಬಿಎಸ್‌ಕೆ) ನಡೆಸಿದ ತಪಾಸಣೆಯಲ್ಲಿ ಕಳೆದ ಒಂದು ವರ್ಷದಲ್ಲಿ 1.72 ಲಕ್ಷ ಮಕ್ಕಳಲ್ಲಿ ದೃಷ್ಟಿ ಸಮಸ್ಯೆ ಪತ್ತೆಯಾಗಿದೆ.
ಆರಂಭಿಕ ಹಂತದಲ್ಲಿಯೇ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಪತ್ತೆ ಹಚ್ಚಿ, ಚಿಕಿತ್ಸೆ ಒದಗಿಸುವ ಸಂಬಂಧ ಅಂಗನವಾಡಿ ಹಾಗೂ ಶಾಲಾ ಹಂತದಲ್ಲಿಯೇ ಈ ಕಾರ್ಯಕ್ರಮದಡಿ 18 ವರ್ಷದೊಳಗಿನವರಿಗೆ ತಪಾಸಣೆ ನಡೆಸಲಾಗುತ್ತಿದೆ. ಹುಟ್ಟಿನ ದೋಷಗಳು, ರೋಗಗಳು, ನ್ಯೂನತೆ ಮತ್ತು ಬೆಳವಣಿಗೆ ಕುಂಠಿತವನ್ನು ಗುರುತಿಸುವುದು ಹಾಗೂ ಉಚಿತವಾಗಿ ಚಿಕಿತ್ಸೆ ಒದಗಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. 2024–25ನೇ ಸಾಲಿನಲ್ಲಿ 1.23 ಕೋಟಿ ಮಕ್ಕಳನ್ನು ಆರ್‌ಬಿಎಸ್‌ಕೆ ತಂಡ ತಪಾಸಣೆ ನಡೆಸಿದೆ. ಈ ಮಕ್ಕಳಿಗೆ ನೇತ್ರ ತಪಾಸಣೆಯನ್ನೂ ನಡೆಸಿದ್ದು, ಹೆಚ್ಚಿನ ಮಕ್ಕಳಲ್ಲಿ ದೃಷ್ಟಿದೋಷ ಸಮಸ್ಯೆ ಪತ್ತೆಯಾಗಿದೆ. ಕೋವಿಡ್ ಬಳಿಕ ಡಿಜಿಟಲ್ ಸಾಧನಗಳ ಅತಿಯಾದ ಬಳಕೆಯೇ ಈ ಸಮಸ್ಯೆ ಹೆಚ್ಚಳಕ್ಕೆ ಕಾರಣವೆಂದು ನೇತ್ರ ತಜ್ಞರು ವಿಶ್ಲೇಷಿಸಿದ್ದಾರೆ.
2022–23ರಲ್ಲಿ ಈ ಕಾರ್ಯಕ್ರಮದಡಿ ನಡೆಸಲಾದ ತಪಾಸಣೆಯಲ್ಲಿ 98 ಸಾವಿರ ಮಕ್ಕಳಲ್ಲಿ ದೃಷ್ಟಿದೋಷ ಪತ್ತೆಯಾಗಿತ್ತು. ಬಳಿಕ, ಮಕ್ಕಳಲ್ಲಿನ ದೃಷ್ಟಿದೋಷ ಪ್ರಕರಣಗಳ ಸಂಖ್ಯೆ ಲಕ್ಷದ ಗಡಿ ದಾಟಿದ್ದು, 2023–24ರಲ್ಲಿ 1.21 ಲಕ್ಷ ಮಕ್ಕಳು ಕಣ್ಣಿನ ಸಮಸ್ಯೆ ಎದುರಿಸುತ್ತಿರುವುದು ತಪಾಸಣೆಯಿಂದ ದೃಢಪಟ್ಟಿದೆ. ಸಮಸ್ಯೆ ಪತ್ತೆಯಾದ ಮಕ್ಕಳಿಗೆ ಹೆಚ್ಚಿನ ನೇತ್ರ ತಪಾಸಣೆ ನಡೆಸಿ, ಕನ್ನಡಕಗಳನ್ನೂ ವಿತರಿಸಲಾಗುತ್ತಿದೆ.
ಕಲಿಕೆಗೆ ತೊಡಕು: ನೇತ್ರ ಸಮಸ್ಯೆಯು ಮಕ್ಕಳ ಕಲಿಕೆಗೆ ತೊಡಕಾಗುತ್ತಿದೆ ಎಂಬ ಕಾರಣಕ್ಕೆ ಈ ಕಾರ್ಯಕ್ರಮದಡಿ ಆರಂಭಿಕ ಹಂತದಲ್ಲಿಯೇ ಸಮಸ್ಯೆಯನ್ನು ಪತ್ತೆ ಮಾಡಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ತಪಾಸಣೆ ನಡೆಸುತ್ತಿದ್ದು, ಸಮಸ್ಯೆ ಪತ್ತೆಯಾದವರಿಗೆ ಸುವರ್ಣ ಸುರಕ್ಷಾ ಟ್ರಸ್ಟ್ ಅಡಿ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ.
‘ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಮೀಪ ದೃಷ್ಟಿ ಸಮಸ್ಯೆ ಹೆಚ್ಚುತ್ತಿದೆ. ಡಿಜಿಟಲ್ ಉಪಕರಣಗಳ ಅತಿಯಾದ ಬಳಕೆ, ಹೊರಾಂಗಣ ಚಟುವಟಿಕೆ ಕಡಿಮೆ ಆಗಿರುವುದು ಸಮಸ್ಯೆಗೆ ಪ್ರಮುಖ ಕಾರಣ. ಈ ಸಮಸ್ಯೆಯನ್ನು ಆರಂಭದಲ್ಲಿಯೇ ಗುರುತಿಸಿ, ಚಿಕಿತ್ಸೆ ಕೊಡಿಸದಿದ್ದರೆ ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆ ಕುಂಠಿತವಾಗುತ್ತದೆ’ ಎಂದು ನೇತ್ರ ತಜ್ಞರು ತಿಳಿಸಿದರು.
ಕೋವಿಡ್ ನಂತರ ಡಿಜಿಟಲ್ ಸಾಧನಗಳ ಮೇಲಿನ ಅವಲಂಬನೆ ಮಕ್ಕಳಲ್ಲಿಯೂ ಹೆಚ್ಚಿದೆ. ಇದರಿಂದ ಚಿಕ್ಕ ವಯಸ್ಸಿನಲ್ಲಿಯೇ ನೇತ್ರ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ
ಡಾ. ನಾಗರಾಜು ಜಿ. ಮಿಂಟೊ ಕಣ್ಣಿನ ಆಸ್ಪತ್ರೆ ನಿಕಟಪೂರ್ವ ನಿರ್ದೇಶಕ
ಕಣ್ಣಿನ ಸಮಸ್ಯೆ ಸಂಬಂಧ ಚಿಕಿತ್ಸೆಗೆ ಬರುವ ಮಕ್ಕಳ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಡಿಜಿಟಲ್ ಸಾಧನಗಳ ಬಳಕೆ ಕಡಿಮೆ ಮಾಡಿ ಹೊರಾಂಗಣ ಚಟುವಟಿಕೆಗೂ ಆದ್ಯತೆ ನೀಡಬೇಕು
ಡಾ. ರೋಹಿತ್ ಶೆಟ್ಟಿ ನಾರಾಯಣ ನೇತ್ರಾಲಯದ ಅಧ್ಯಕ್ಷ
ಅತಿಯಾದ ಮೊಬೈಲ್ ಅವಲಂಬನೆ
ಮಕ್ಕಳಲ್ಲಿ ಸ್ಮಾರ್ಟ್‌ಫೋನ್ ವ್ಯಸನ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನೇತ್ರ ತಜ್ಞರು ‘ಸುದೀರ್ಘ ಅವಧಿ ಡಿಜಿಟಲ್ ಪರದೆಯನ್ನು ನೋಡುವುದರಿಂದ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಡಿಜಿಟಲ್ ಪರದೆಯಿಂದ ಹೊರಹೊಮ್ಮುವ ಬೆಳಕು ಕಣ್ಣಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಕಣ್ಣಿನಲ್ಲಿ ನೋವು ಉರಿ ತುರಿಕೆ ನೀರು ಹರಿಯುವುದು ಕೆಂಪಾಗುವುದು ಸೇರಿ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಶಾಲೆಗಳಲ್ಲಿಯೂ ಪಠ್ಯವನ್ನು ಪಿಡಿಎಫ್ ರೂಪದಲ್ಲಿ ಒದಗಿಸುತ್ತಿರುವುದರಿಂದ ಡಿಜಿಟಲ್ ಸಾಧನಗಳ ಮೇಲಿನ ಮಕ್ಕಳ ಅವಲಂಬನೆ ಹೆಚ್ಚುತ್ತಿದೆ’ ಎಂದು ಹೇಳಿದರು. ಇತರ ಪ್ರಮುಖ ಕಾರಣಗಳು ಆನುವಂಶಿಕವಾಗಿ ಪೋಷಕಾಂಶ ಕೊರತೆ ಕಣ್ಣಿನ ಸೋಂಕು ಗಾಯಗಳಿಂದಲೂ ದೃಷ್ಟಿ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.