ADVERTISEMENT

ಬೆಂಗಳೂರು: ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 15:30 IST
Last Updated 16 ಜೂನ್ 2025, 15:30 IST
<div class="paragraphs"><p>ಬಾಂಬ್ ಬೆದರಿಕೆ</p></div>

ಬಾಂಬ್ ಬೆದರಿಕೆ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ನಗರದ ಕಲಾಸಿಪಾಳ್ಯ, ಕುಂಬಳಗೋಡು ಹಾಗೂ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಗಳ ವ್ಯಾಪ್ತಿಯ ಕೆಲವು ಶಾಲೆಗಳಿಗೆ ಸೋಮವಾರ ಬಾಂಬ್‌ ಬೆದರಿಕೆ ಸಂದೇಶದ ಇ–ಮೇಲ್‌ ಬಂದಿದ್ದು, ಶಾಲಾ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ADVERTISEMENT

ಹಾಸನ ನಗರದ ಎರಡು ಶಾಲೆಗಳಿಗೆ ಕಳುಹಿಸಿದ್ದ ಬಾಂಬ್‌ ಬೆದರಿಕೆ ಇ–ಮೇಲ್‌ ಮಾದರಿಯಲ್ಲೇ ಬೆಂಗಳೂರಿನ ಶಾಲೆಗಳಿಗೂ ಹುಸಿ ಸಂದೇಶ ಕಳುಹಿಸಲಾಗಿತ್ತು ಎಂದು ಪೊಲೀಸರು ಹೇಳಿದರು.‌

‘ಹೈದರಾಬಾದ್​ನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯ ಕೊಡಿಸಬೇಕು. ಇಲ್ಲವಾದಲ್ಲಿ ಶಾಲೆಗಳ ಕಟ್ಟಡವನ್ನು ಸ್ಫೋಟಿಸುತ್ತೇವೆ ಎಂಬುದಾಗಿ ಇ–ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಶಾಲಾ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಬಾಂಬ್‌ ನಿಷ್ಕ್ರಿಯ ದಳ, ಬಾಂಬ್‌ ತಪಾಸಣೆ ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದರು. ಯಾವುದೇ ಸ್ಫೋಟಕ ವಸ್ತುಗಳಾಗಲಿ, ರಾಸಾಯನಿಕ ಪದಾರ್ಥಗಳಾಗಲಿ ಪತ್ತೆ ಆಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢವಾಯಿತು. ಶಾಲಾ ವಿಳಾಸಕ್ಕೆ ಬಂದ ಇ–ಮೇಲ್‌ ಮೂಲವನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಜೂನ್‌ 13ರಂದು ಬೆದರಿಕೆ ಸಂದೇಶ ಬಂದಿತ್ತು. ಈ ಸಂಬಂಧ ದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.