ADVERTISEMENT

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ವೇತನ ಪಡೆದ !

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 19:46 IST
Last Updated 20 ಡಿಸೆಂಬರ್ 2019, 19:46 IST

ಬೆಂಗಳೂರು: ವಿಧಾನಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಅವರ ಆಪ್ತ ಕಾರ್ಯದರ್ಶಿ ಎಂಬುದಾಗಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದಿಂದ 7 ತಿಂಗಳು ಸಂಬಳ ಪಡೆದಿರುವ ಆರೋಪದಡಿ ಎಸ್‌.ಕೆ. ರವಿಕುಮಾರ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

‘ವಂಚನೆ ಸಂಬಂಧ ಕೆ.ಪಿ.ನಂಜುಂಡಿ ಅವರೇ ದೂರು ನೀಡಿದ್ದಾರೆ. ಕುಣಿಗಲ್ ತಾಲ್ಲೂಕಿನ ಸಂತೆಮಾತೂರಿನ ರವಿಕುಮಾರ್ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಬೇಕಿದೆ’ ಎಂದು ವಿಧಾನಸೌಧ ಪೊಲೀಸರು ಹೇಳಿದರು.‌

‘ನಂಜುಂಡಿ ಅವರ ಸಹಿಯನ್ನು ನಕಲು ಮಾಡಿರುವ ಆರೋಪಿ ಅದನ್ನು ಬಳಸಿಕೊಂಡು ಲೇಟರ್ ಪ್ಯಾಡ್‌ ಸೃಷ್ಟಿಸಿದ್ದಾನೆ. ನಂಜುಂಡಿ ಅವರ ಆಪ್ತ ಕಾರ್ಯದರ್ಶಿ ತಾನೇ ಎಂದು ಹೇಳಿಕೊಂಡು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಗೂ ಲೇಟರ್‌ ಪ್ಯಾಡ್ ನೀಡಿದ್ದಾನೆ. ಈ ಸಂಗತಿ ದೂರಿನಲ್ಲಿದೆ’ ಎಂದರು.

ADVERTISEMENT

‘ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೂ ಕರ್ತವ್ಯ ನಿರ್ವಹಿಸಿರುವುದಾಗಿ ಹಾಜರಾತಿ ಪತ್ರವನ್ನು ಸೃಷ್ಟಿಸಿದ್ದ ಆರೋಪಿ ಅದನ್ನೇ ಇಲಾಖೆಗೆ ಕೊಟ್ಟು 7 ತಿಂಗಳ ಸಂಬಳವನ್ನೂ ಪಡೆದಿದ್ದಾನೆ. ಇತ್ತೀಚೆಗೆ ಆತನ ಕೃತ್ಯ ಬಯಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.