ADVERTISEMENT

80 ಬಂಡಲ್‌ ನಕಲಿ ಸಿಗರೇಟ್‌ ಜಪ್ತಿ; ಇಬ್ಬರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 15:18 IST
Last Updated 2 ಡಿಸೆಂಬರ್ 2025, 15:18 IST
ಇಮ್ರಾನ್‌ 
ಇಮ್ರಾನ್‌    

ಬೆಂಗಳೂರು: ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಸಿಗರೇಟ್‌ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಲ್ಲೇಶ್ವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಾಟನ್‌ಪೇಟೆಯ ಕೆ.ಕೆ.ಲೇನ್‌ನ 11ನೇ ಕ್ರಾಸ್‌ನ ನಿವಾಸಿ ಇಮ್ರಾನ್‌ (36) ಹಾಗೂ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪಾಲುಟೊಳ್ಳಿ ಗ್ರಾಮದ ರಹೀಸ್ ಬಂಧಿತರು. ನಗರದ ಮಾರಪ್ಪನಪಾಳ್ಯದ ಬಾಡಿಗೆ ಮನೆಯಲ್ಲಿ ರಹೀಸ್ ನೆಲಸಿದ್ದ.

‘ಬಂಧಿತರಿಂದ ₹2.50 ಲಕ್ಷ ಮೌಲ್ಯದ ಒಟ್ಟು 80 ಬಂಡಲ್‌ ನಕಲಿ ಸಿಗರೇಟ್‌ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಆರೋಪಿಗಳಿಬ್ಬರೂ ಕೆಲವು ತಿಂಗಳಿಂದ ಪರಿಚಿತರಾಗಿದ್ದರು. ಮಲ್ಲೇಶ್ವರದ 10ನೇ ಕ್ರಾಸ್‌ ಹಾಗೂ ಸಂಪಿಗೆ ರಸ್ತೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ನಕಲಿ ಸಿಗರೇಟ್‌ಗಳನ್ನು ಐಟಿಸಿ ಕಂಪನಿಯ ಅಸಲಿ ಸಿಗರೇಟ್‌ಗಳೆಂದು ನಂಬಿಸಿ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರಿಗೆ ಮಾರಾಟ ಮಾಡುತ್ತಿದ್ದರು. ಈ ಸಂಬಂಧ ಕಂಪನಿಯ ಸಿಬ್ಬಂದಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಲ್ಲೇಶ್ವರದ 10ನೇ ಕ್ರಾಸ್‌ನಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ, ಕಾಸರಗೋಡಿನ ವ್ಯಕ್ತಿಯೊಬ್ಬರಿಂದ ನಕಲಿ ಸಿಗರೇಟ್‌ ತಂದು ಮಲ್ಲೇಶ್ವರದ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳು ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ ಗೋಲ್ಡ್‌ ಫ್ಲೇಕ್‌ ಲೈಟ್ಸ್‌ನ 35 ಬಂಡಲ್‌, ಗೋಲ್ಡ್‌ ಫ್ಲೇಕ್‌ ಕಿಂಗ್ಸ್‌ 44 ಬಂಡಲ್‌, ಮಿನಿ ಗೋಲ್ಡ್‌ ಫ್ಲೇಕ್‌ 1 ಬಂಡಲ್‌ ಸೇರಿದಂತೆ ಒಟ್ಟು 80 ಬಂಡಲ್‌ ನಕಲಿ ಸಿಗರೇಟ್‌ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ರಹೀಸ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.