ADVERTISEMENT

ರೈಲ್ವೆ ಪ್ರಯಾಣಕ್ಕೆ ನಕಲಿ ‘ನೆಗಟಿವ್’ ವರದಿ; ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 13 ಮೇ 2021, 8:59 IST
Last Updated 13 ಮೇ 2021, 8:59 IST
   

ಬೆಂಗಳೂರು: ನಗರದಿಂದ ರೈಲಿನ ಮೂಲಕ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಪ್ರಯಾಣಿಸುತ್ತಿದ್ದ ಜನರಿಗೆ ಕೋವಿಡ್ ನೆಗಟಿವ್ ನಕಲಿ ವರದಿ ಪ್ರತಿ ನೀಡುತ್ತಿದ್ದ ಆರೋಪದಡಿ ಸಂಪತ್‌ ಲಾಲ್ ಎಂಬಾತನನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಅಕ್ಕಿಪೇಟೆ ಮುಖ್ಯರಸ್ತೆ ನಿವಾಸಿ ಸಂಪತ್ ಲಾಲ್, ಹಲವು ದಿನಗಳಿಂದ ಕೃತ್ಯ ಎಸಗುತ್ತಿದ್ದ. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೆರೆಹಿಡಿಯಲಾಗಿದೆ. ಆತನಿಂದ 3 ನಕಲಿ ನೆಗಟಿವ್ ವರದಿ ಪ್ರತಿ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರೈಲು ಹಾಗೂ ವಿಮಾನ ಟಿಕೆಟ್ ಕಾಯ್ದಿರಿಸುವ ಏಜೆಂಟ್‌ನಾಗಿ ಆರೋಪಿ ಕೆಲಸ ಮಾಡುತ್ತಿದ್ದ. ಲಾಕ್‌ಡೌನ್ ಸಮಯದಲ್ಲಿ ರೈಲಿನಲ್ಲಿ ಪ್ರಯಾಣಿಸಲು ಅವಕಾಶವಿದ್ದು, ಕೋವಿಡ್ ನೆಗಟಿವ್ ವರದಿಯನ್ನು ಕಡ್ಡಾಯ ಮಾಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿ, ಕೆಲವರಿಗೆ ನಕಲಿ ವರದಿ ತಯಾರಿಸಿ ಕೊಡುತ್ತಿದ್ದ.’

ADVERTISEMENT

‘ಲ್ಯಾಬ್‌ಗಳ ಹೆಸರಿನಲ್ಲಿ ನಕಲಿ ಪ್ರಮಾಣಪತ್ರಗಳನ್ನು ಸಿದ್ಧಪಡಿಸಿದ್ದ ಆರೋಪಿ, ಅದಕ್ಕೆ ನಕಲಿ ವೈದ್ಯರ ಸಹಿಯನ್ನೂ ಮಾಡಿದ್ದ. ಅಂಥ ಪ್ರತಿಗಳನ್ನು ಒಂದಕ್ಕೆ ₹ 3 ಸಾವಿರದಿಂದ ₹ 4 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

‘ರಾಜಸ್ಥಾನ ಹಾಗೂ ಪಶ್ಚಿಮ ಬಂಗಾಳಕ್ಕೆ ರೈಲಿನ ಮೂಲಕ ಹೋಗಿರುವ ಹಲವರು ಆರೋಪಿ ಬಳಿ ನಕಲಿ ವರದಿ ಪ್ರತಿ ಪಡೆದುಕೊಂಡಿದ್ದು ತನಿಖೆಯಿಂದ ಗೊತ್ತಾಗಿದೆ. ಅಂಥ ಪ್ರಯಾಣಿಕರ ಪಟ್ಟಿ ಸಮೇತ ಆಯಾ ರಾಜ್ಯಗಳ ಪೊಲೀಸರಿಗೆ ಮಾಹಿತಿ ನೀಡಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.