ಬೆಂಗಳೂರು: ರೆಮ್‌ಡಿಸಿವಿರ್ ಚುಚ್ಚುಮದ್ದಿನ ಖಾಲಿ ಬಾಟಲಿಗಳಲ್ಲಿ ಎನ್.ಎಸ್. ದ್ರಾವಣ ತುಂಬಿಸಿ ‘ನಕಲಿ ರೆಮ್‌ಡಿಸಿವಿರ್’ ಮಾರಾಟ ಮಾಡುತ್ತಿದ್ದ ಆರೋಪದಡಿ ಮೂವರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.
‘ಮೈಸೂರು ರಸ್ತೆಯ ಎಸ್. ರವಿಕುಮಾರ್ (36), ನಾಗವಾರ ಮುಖ್ಯರಸ್ತೆಯ ಎನ್. ಮುನಿರಾಜು (30) ಹಾಗೂ ಕಾಮಾಕ್ಷಿಪಾಳ್ಯದ ಕೃಷ್ಣ (31) ಬಂಧಿತರು. ಅವರಿಂದ 9 ನಕಲಿ ರೆಮ್‌ಡಿಸಿವಿರ್ ಬಾಟಲಿ ಹಾಗೂ ₹ 55 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಹೊಸೂರು ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಆಸ್ಪತ್ರೆ ಹಾಗೂ ಕೂಡ್ಲುವಿನಲ್ಲಿರುವ ಮಾತೃ ಆಸ್ಪತ್ರೆಯ ಹೌಸ್ ಕೀಪಿಂಗ್ ವ್ಯವಸ್ಥಾಪಕನಾಗಿದ್ದ ಕೃಷ್ಣ ಜೊತೆ ರವಿಕುಮಾರ್ ಹಾಗೂ ಮುನಿರಾಜು ಒಡನಾಟ ಹೊಂದಿದ್ದರು. ಆಸ್ಪತ್ರೆಯಲ್ಲಿ ಬಳಸಿ ಎಸೆಯುತ್ತಿದ್ದ ರೆಮ್‌ಡಿಸಿವಿರ್ ಬಾಟಲಿಗಳನ್ನು ಕೃಷ್ಣ ಮೂಲಕ ಆರೋಪಿಗಳು ಪಡೆಯುತ್ತಿದ್ದರು.’
’ಅದೇ ಬಾಟಲಿಗಳಲ್ಲಿ ಎನ್.ಎಸ್. ದ್ರಾವಣವನ್ನು ತುಂಬುತ್ತಿದ್ದರು. ಕೊರೊನಾ ಸೋಂಕಿತರು ಹಾಗೂ ಅವರ ಸಂಬಂಧಿಕರಿಗೆ, ಅಸಲಿ ರೆಮ್‌ಡಿಸಿವಿರ್ ಎಂದು ಹೇಳಿ ದುಬಾರಿಗೆ ಬೆಲೆಗೆ ನಕಲಿ ಚುಚ್ಚುಮದ್ದು ಮಾರುತ್ತಿದ್ದರು’ ಎಂದೂ ತಿಳಿಸಿದರು.
ಆಸ್ಪತ್ರೆಯಲ್ಲಿ ಕೆಲಸ: ‘ಬಂಧಿತ ಆರೋಪಿ ರವಿಕುಮಾರ್, ಈ ಹಿಂದೆ ವಿಕ್ಟೋರಿಯಾ, ಅಪೊಲೊ, ರಾಮಕೃಷ್ಣ ಹಾಗೂ ಶ್ರೀ ವೆಂಕಟೇಶ್ವರ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಮುನಿರಾಜು, ಓವಮ್ ವುಮೆನ್ ಮತ್ತು ಚೈಲ್ಡ್ ಕೇರ್ ಆಸ್ಪತ್ರೆಯ ಮಾರ್ಕೇಟಿಂಗ್ ವ್ಯವಸ್ಥಾಪಕನಾಗಿದ್ದ’ ಎಂದು ಪೊಲೀಸರು ಹೇಳಿದರು.
‘ನಕಲಿ ರೆಮ್‌ಡಿಸಿವಿರ್ ಚುಚ್ಚುಮದ್ದುಗಳನ್ನು ಆರೋಪಿಗಳು ಹಲವರಿಗೆ ನೀಡಿದ್ದಾರೆ. ಕೆಲ ಸೋಂಕಿತರ ಚಿಕಿತ್ಸೆಗೆ ಅದನ್ನೇ ಬಳಸಿರುವ ಮಾಹಿತಿಯೂ ಇದೆ’ ಎಂದೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.