
ಬೆಂಗಳೂರು: ಚಿನ್ನ ಖರೀದಿಯ ಸೋಗಿನಲ್ಲಿ ಚಿನ್ನದ ಮಳಿಗೆಗೆ ತೆರಳಿ ಮಾಲೀಕರ ಗಮನವನ್ನು ಬೇರೆಡೆಗೆ ಸೆಳೆದು ನಕಲಿ ಉಂಗುರವಿಟ್ಟು ಅಸಲಿ ಉಂಗುರ ಕಳವು ಮಾಡಿದ್ದ ಆರೋಪಿಯನ್ನು ಜ್ಞಾನಭಾರತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಿ.ಜಿ.ರಾಜೇಶ್ (36) ಬಂಧಿತ ಆರೋಪಿ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಬೀಚನಹಳ್ಳಿಯ ನಿವಾಸಿ ರಾಜೇಶ್, ಬೆಂಗಳೂರಿನ ಬ್ಯಾಡರಹಳ್ಳಿಯ ಕೆಂಪೇಗೌಡನಗರದ ಮೂರನೇ ಕ್ರಾಸ್‌ನಲ್ಲಿ ನೆಲಸಿದ್ದ. ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ.
ಬಂಧಿತ ಆರೋಪಿಯಿಂದ ₹2.30 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಭುವನೇಶ್ವರಿನಗರದ ದೊಡ್ಡಬಸ್ತಿ ಮುಖ್ಯರಸ್ತೆಯ ಗಣೇಶ್ ಗೋಲ್ಡ್ ಪ್ಯಾಲೇಸ್‌ನ ಮಾಲೀಕ ಬಾಬು ಲಾಲ್ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಯಿತು ಎಂದು ಮೂಲಗಳು ಹೇಳಿವೆ.
ಆರೋಪಿಯ ಕೃತ್ಯ ಹೇಗಿತ್ತು?: ನ.3ರಂದು ಚಿನ್ನದ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಆರೋಪಿ ಬಂದಿದ್ದ. ಚಿನ್ನದ ಉಂಗುರ ತೋರಿಸಿ ಎಂದು ಕೇಳಿದ್ದ. ಬೇರೆ ಬೇರೆ ವಿನ್ಯಾಸದ ಐದು ಉಂಗುರಗಳನ್ನು ಸಿಬ್ಬಂದಿ ತೋರಿಸಿದ್ದರು. ಸಿಬ್ಬಂದಿ ಬೇರೆ ಗ್ರಾಹಕರ ಜತೆಗೆ ಮಾತನಾಡುತ್ತಿರುವಾಗ, 15 ಗ್ರಾಂ ತೂಕದ ಚಿನ್ನದ ಉಂಗುರವನ್ನು ತೆಗೆದುಕೊಂಡು ಅದೇ ಟ್ರೇನಲ್ಲಿ ನಕಲಿ ಉಂಗುರ ಇಟ್ಟು ಆರೋಪಿ ಪರಾರಿಯಾಗಿದ್ದ. ಅಂದು ಸಂಜೆ ಚಿನ್ನಾಭರಣ ಪರಿಶೀಲನೆ ವೇಳೆ ನಕಲಿ ಉಂಗುರ ಎಂಬುದು ಪತ್ತೆಯಾಗಿತ್ತು ಎಂದು ಮೂಲಗಳು ಹೇಳಿವೆ.
ಈ ಹಿಂದೆಯೂ ಆರೋಪಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಕಾರಾಗೃಹಕ್ಕೆ ಹೋಗಿದ್ದ. ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಅದೇ ಕೃತ್ಯದಲ್ಲಿ ತೊಡಗಿದ್ದ ಎಂದು ಪೊಲೀಸರು ಹೇಳಿದರು.
ಆರೋಪಿ ಬಂಧನದಿಂದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಹಾಗೂ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಂದು ಪ್ರಕರಣ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.