ADVERTISEMENT

ಚಿಕ್ಕಪ್ಪನ ಮನೆಯಲ್ಲಿ ಕದ್ದ ಹಣದಲ್ಲಿ ಪಾರ್ಟಿ, ಗೋವಾ ಪ್ರವಾಸ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 18:59 IST
Last Updated 29 ಜುಲೈ 2025, 18:59 IST
ಆರೋಪಿಗಳಿಂದ ವಶಕ್ಕೆ ಪಡೆದ ನಗದು 
ಆರೋಪಿಗಳಿಂದ ವಶಕ್ಕೆ ಪಡೆದ ನಗದು    

ಬೆಂಗಳೂರು: ಸ್ನೇಹಿತನೊಂದಿಗೆ ಸೇರಿಕೊಂಡು ಚಿಕ್ಕಪ್ಪನ ಮನೆಯಲ್ಲಿಯೇ ನಗದು, ಚಿನ್ನಾಭರಣ ಕಳವು ಮಾಡಿ ಬಂದ ಹಣದಿಂದ ಪಾರ್ಟಿ, ಪ್ರವಾಸ ಮಾಡುತ್ತಿದ್ದ ನಾಲ್ವರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭೈರತಿ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀನಿವಾಸ ರೆಡ್ಡಿ ಅವರ ದೂರು ಆಧರಿಸಿ, ಕೊತ್ತನೂರು ನಿವಾಸಿ ಸಚಿತಾ, ಯಶವಂತ್, ಕಸವನಹಳ್ಳಿಯ ರಾಮಪ್ರಕಾಶ್, ತನುಷ್‌ ಅವರನ್ನು ಬಂಧಿಸಿ, ₹10 ಲಕ್ಷ ನಗದು, 548 ಗ್ರಾಂ ಚಿನ್ನಾಭರಣ ಹಾಗೂ ಚಿನ್ನದ ಗಟ್ಟಿ ಸೇರಿದಂತೆ ₹65 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಪಡಿಸಿಕೊಳ್ಳಲಾಗಿದೆ. ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀನಿವಾಸ್ ಅವರ ಮನೆಯ ಕೊಠಡಿಯ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಕಳವು ಆಗಿರುವ ಬಗ್ಗೆ ಮನೆಯ ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಿ, ದೂರು ನೀಡಿದ್ದರು.

ADVERTISEMENT

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಪೊಲೀಸರು, ಸಿಸಿಟಿವಿ ಕ್ಯಾಮೆರಾ ಹಾಗೂ ಸ್ಥಳೀಯರ ಮಾಹಿತಿ ಆಧರಿಸಿ, ದೂರದಾರರ ಸಹೋದರನ ಮಗಳನ್ನು ಠಾಣೆಗೆ ಕರೆಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಸಚಿತಾ ಮತ್ತು ಯಶವಂತ್ ಪದವಿ ಓದುತ್ತಿದ್ದು, ಪರಸ್ಪರ ಪ್ರೀತಿಸುತ್ತಿದ್ದಾರೆ. ಮೋಜು ಮಸ್ತಿ ಮಾಡಲು ಹಣದ ಕೊರತೆ ಇದ್ದಿದ್ದರಿಂದ ಸ್ನೇಹಿತರ ಅಣತಿಯಂತೆ ಯುವತಿಯು ಜನವರಿಯಿಂದಲೇ ಹಂತ-ಹಂತವಾಗಿ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ.  ಆಭರಣವನ್ನು ಯಶವಂತ್‌ಗೆ ತಂದು ಕೊಡುತ್ತಿದ್ದಳು. ಈತ ಕಾಲೇಜಿನಲ್ಲಿ ಓದುತ್ತಿರುವ ತನ್ನ ಇಬ್ಬರು ಸ್ನೇಹಿತರಿಗೆ ನೀಡಿದ್ದು, ಅವುಗಳನ್ನು ತಮಗೆ ಗೊತ್ತಿರುವ ಅಕ್ಕಸಾಲಿಗನ ಬಳಿ ಕೊಟ್ಟು ಕರಗಿಸಿ, ಚಿನ್ನದ ಗಟ್ಟಿಯಾಗಿ ಮಾರ್ಪಡಿಸಿ ಮಾರಾಟ ಮಾಡಿ ಹಣ ಪಡೆಯುತ್ತಿದ್ದರು. ಆ ಹಣದಲ್ಲಿ ಪಾರ್ಟಿ, ಗೋವಾ ಪ್ರವಾಸಕ್ಕೆ ಹೋಗುತ್ತಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಚಿನ್ನಾಭರಣ ಸ್ವೀಕರಿಸಿದ್ದ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ನಾಲ್ವರು ಆರೋಪಿಗಳನ್ನು ವಿಚಾರಣೆ ನಡೆಸಿ, ಚಿಕ್ಕಪೇಟೆಯ ಎರಡು ಆಭರಣ ಅಂಗಡಿ ಮತ್ತು ಕೊತ್ತನೂರಿನಲ್ಲಿ ವಾಸವಿರುವ ಇಬ್ಬರು ಆರೋಪಿಗಳ ಮನೆಯಿಂದ ಒಟ್ಟು 548 ಗ್ರಾಂ ಚಿನ್ನಾಭರಣ, ಚಿನ್ನದ ಗಟ್ಟಿ ಮತ್ತು ₹10 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ₹65 ಲಕ್ಷ ಎಂದು ಮಾಹಿತಿ ನೀಡಿದರು.

ಉಳಿದ ಚಿನ್ನಾಭರಣಗಳ ಪತ್ತೆ ಕಾರ್ಯ ಮುಂದುವರಿದಿದ್ದು, ತನಿಖೆ ಪ್ರಗತಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.